ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟ ಆಡಲು ಹೋಗಿ ಕಾರಿನ ಡಿಕ್ಕಿಯೊಳಗೆ ಲಾಕ್ ಆದ ಮಗುವೊಂದು ಉಸಿರಾಡಲಾಗದೇ ಮೃತಪಟ್ಟಿರುವ ಘಟನೆ ಯಾದಗಿರಿಯ ತೊನಸನಹಳ್ಳಿಯಲ್ಲಿ ನಡೆದಿದೆ.
ಕೊಟ್ಟೂರೇಶ್ವರ ಪೂಜ್ಯರ ಅವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ. ಬಸವಪ್ರಭು ಮನೆಯ ಮುಂದೆ ಮಕ್ಕಳ ಜೊತೆ ಆಟ ಆಡುವ ವೇಳೆ ಕಾರಿನ ಡಿಕ್ಕಿಯೊಂದು ಓಪನ್ ಆಗಿರುವುದನ್ನು ನೋಡಿದ್ದಾರೆ.
ತಕ್ಷಣ ಡಿಕ್ಕಿಯ ಒಳಕ್ಕೆ ಹೋಗಿದ್ದಾನೆ, ಸ್ವಲ್ಪ ಸಮಯದ ನಂತರ ಗಾಳಿಗೆ ಬೂಟ್ ಸ್ಪೇಸ್ ಬಾಗಿಲು ಹಾಕಿಕೊಂಡಿದೆ. ಮಗುವಿಗೆ ಹೊರಗೆ ಬರೋದು ಹೇಗೆ ಅನ್ನೋದು ಅರ್ಥವಾಗಿಲ್ಲ. ಗಾಬರಿಯಾದ ಮಗು ಸೀಟಿನ ಕೆಳಕ್ಕೆ ಬರಲು ಪ್ರಯತ್ನಿಸಿದೆ. ಈ ವೇಳೆ ತಲೆ ಸಿಕ್ಕಿಹಾಕಿಕೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಕಂದನಿಗೆ ಹೊರಗೆ ಬರಲು ಆಗಿಲ್ಲ. ಅಲ್ಲಿಯೇ ಮಗು ಉಸಿರುಗಟ್ಟಿ ಮೃತಪಟ್ಟಿದೆ.
ಮಧ್ಯಾಹ್ನವಾದರೂ ಮಗು ಕಾಣದೇ ಇದ್ದಾಗ ಪೋಷಕರು ಇಡೀ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ. ಗಂಟೆಗಳ ನಂತರ ಮನೆಯ ಮುಂದೆಯೇ ಇದ್ದ ಕಾರನ್ನು ತೆಗೆದುನೋಡಿದಾಗ ಮಗು ಪ್ರಜ್ಞೆಯಿಲ್ಲದೇ ಬಿದ್ದಿರುವುದು ಕಾಣಿಸಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪೋಷಕರು ನೋಡಿದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ. ಮನೆಯ ಮುಂದೆ ಆಟವಾಡ್ತಿದೆ ಎಂದು ತಿಳಿದುಕೊಂಡಿದ್ದ ಪೋಷಕರಿಗೆ ಆಘಾತವಾಗಿದೆ. ಮೂರು ವರ್ಷದ ಕಂದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.



