ಹಿಂದುತ್ವದ ಮೂಲಕವೇ ಹಳೆ ಮೈಸೂರನ್ನು ಗೆಲ್ಲುತ್ತೇವೆ: ಡಿ.ವಿ.ಸದಾನಂದ ಗೌಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ, ದಕ್ಷಿಣ ಕನ್ನಡದಲ್ಲಿ ಪಕ್ಷ ಗೆದ್ದಂತೆ ಹಳೆ ಮೈಸೂರು ಭಾಗದಲ್ಲಿಯೂ ಹಿಂದುತ್ವದ ಮೂಲಕವೇ ಬಿಜೆಪಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲಿದೆ. ಇದಕ್ಕೆ ಅಮಿತ್ ಶಾ ಮಂಡ್ಯ ಭೇಟಿ ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಳೆ ಮೈಸೂರು ಭಾಗದ 40 ಕ್ಷೇತ್ರದಲ್ಲಿ ನಮ್ಮ ನೆಲೆ ಅಷ್ಟಾಗಿ ಇರಲಿಲ್ಲ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ಈಗ ನಮ್ಮ ಟಾರ್ಗೆಟ್ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದಾಗಿದೆ. ಅದರಲ್ಲಿ 89 ಕ್ಷೇತ್ರಗಳು ಹಳೆ ಮೈಸೂರು ಪ್ರಾಂತ್ಯದಲ್ಲಿ ಬರಲಿವೆ.

ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಏಕೆ ಎನ್ನುವ ಪ್ರಶ್ನೆ ಬರುತ್ತಿದೆ. ಅಶ್ವತ್ಥನಾರಾಯಣರನ್ನು ಟೀಕಿಸುತ್ತಿದ್ದಾರೆ. ಆದರೆ, ದೇವೇಗೌಡರಿಗೆ ಈ ವಿಚಾರ ಮೊದಲು ಹೊಳೆಯಬೇಕಿತ್ತು. ರಾಮನಗರದಲ್ಲಿ ರಾಮಮಂದಿರ ಕಟ್ಟಬೇಕು ಎಂದು ಗೌಡರಿಗೇ ಅನ್ನಿಸಬೇಕಿತ್ತು. ಯಾಕೆಂದರೆ ನಮ್ಮೆಲ್ಲರಿಗಿಂತ ಪೂಜೆ, ಪುನಸ್ಕಾರವನ್ನು ಅವರೇ ಹೆಚ್ಚು ಮಾಡುತ್ತಾರೆ. ಆದರೆ ಬಹುಶಃ ಅವರಿಗೆ ಹೆದರಿಕೆ ಇರಬೇಕು ಎನಿಸುತ್ತದೆ. ಅದಕ್ಕೆ ರಾಮ ಮಂದಿರದ ಯೋಚನೆ ಮಾಡಲಿಲ್ಲ. ಅಲ್ಲದೇ ಅವರು, ನಾನು ಹುಟ್ಟಿದರೆ ಅಲ್ಲಿ ಹುಟ್ಟುತ್ತೇನೆ ಎನ್ನುತ್ತಾರೆ (ಮುಸ್ಲಿಂ ಆಗಿ) ಎಂದು ದೇವೇಗೌಡರಿಗೆ ಟಾಂಗ್ ಕೊಟ್ಟರು.

ನಮ್ಮ ಪಕ್ಷದಲ್ಲಿ ಪೊಲಿಟಿಕಲ್ ಮ್ಯಾನೇಜ್​ಮೆಂಟ್​ ಮಾಡುವ ರಾಜಕೀಯ ಚಾಣಕ್ಯ ಅಮಿತ್ ಶಾ ಅವರು ಎರಡು ದಿನಗಳ ಕಾಲ ರಾಜ್ಯದಲ್ಲಿದ್ದುಕೊಂಡು ಹಾಲು ಉತ್ಪಾದನೆ ಹೆಚ್ಚಿರುವ ಭಾಗದಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದೇ ವೇಳೆ ಪಕ್ಷ ಸಂಘಟನೆಯ ಕೆಲಸದಲ್ಲೂ ತೊಡಗುತ್ತಾರೆ ಎಂದು ಡಿವಿಎಸ್ ಹೇಳಿದರು.

ಬೂತ್​ ವಿಜಯ್​ ಅಭಿಯಾನ
ಡಿ.30 ರಂದು ಮಂಡ್ಯದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡುತ್ತಿದ್ದು, 31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 2ರಿಂದ ಜನವರಿ 15ರ ತನಕ ನಡೆಯಲಿರುವ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!