ಹೊಸದಿಗಂತ ವರದಿ ಹಾಸನ:
ಹಾಸನದಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಹಾಸನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೇ ವ್ಯಕ್ತಿಯೊಬ್ಬನಿಗೆ ನಾಲ್ಕೈದು ಜನ ಪುಡಿರೌಡಿಗಳು ಮನಸೋ ಇಚ್ಛೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.
ಹಾಸನ ನಗರದ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಓರ್ವ ವ್ಯಕ್ತಿಗೆ ನಾಲ್ಕೈದು ಜನ ಪುಂಡರು ಸಾರ್ವಜನಿಕವಾಗಿಯೇ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಿನಿಮೀಯ ರೀತಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಈ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ವ್ಯಕ್ತಿಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಾ ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯಗಳನ್ನು ಸೆರೆಹಿಡಿದಿದ್ದು, ಎಲ್ಲೆಡೆ ವೈರಲ್ ಆಗಿದೆ.
ನಗರದಲ್ಲಿ ಪುಂಡರಿಂದ ಸಾರ್ವಜನಿಕರು ದಿನನಿತ್ಯ ವಿವಿಧ ರೀತಿಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಂಡರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.