ಕೋಡಕಣಿಯಲ್ಲಿ ವಿಕ್ರಮತೈಲನ ತಿಗಳಾರಿ ಶಾಸನ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಕಾರವಾರ:
ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಹನ್ನೆರಡನೇ ಶತಮಾನಕ್ಕೆ ಸೇರಿದ ಪ್ರಾಚೀನ ಶಾಸನವನ್ನು ಪತ್ತೆಹಚ್ಚಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಶಾಸನ ಸಂಪುಟದ ರಚನೆಯ ಉದ್ದೇಶದಿಂದ ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಕೈಗೊಂಡ ಎರಡನೇ ಹಂತದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಲ್ಲಿನ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿನ ತೆಂಗಿನ ಮರದ ಬುಡದಲ್ಲಿ ಹನ್ನೆರಡನೇ ಶತಮಾನಕ್ಕೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನವನ್ನು ಪತ್ತೆಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ಯಾಮಸುಂದರ ಗೌಡ, ಈಗ ದೊರೆತಿರುವ ತಿಗಳಾರಿ ಲಿಪಿಯಲ್ಲಿರುವ ಈ ಶಾಸನ ಒಟ್ಟೂ ಮೂವತ್ತೆರಡು ಸಾಲುಗಳಲ್ಲಿ ಬರೆದಿದ್ದು, ಶಿಶುಗಲಿ ಪಾಂಡ್ಯರ ರಾಜ ವಿಕ್ರಮ ತೈಲನದ್ದಾಗಿದೆ. ಹೆರ್ಗ್ಗಡಹೇಯ (ಬಹುಶಃ ಈಗಿನ ಹೆಗಡೆ) ಗ್ರಾಮದಲ್ಲಿ ಲಿಷ್ಣಮನ ತಮ್ಮ ನಾರಾಯಣ ಮತ್ತು ಸೀಗೆಯ ನಾರಾಯಣರು ಪ್ರತಿಷ್ಠಾಪಿಸಿದ್ದ ದೇವರಿಗೆ ನಂದಾದೀಪ ಮತ್ತು ನೈವೇದ್ಯಕ್ಕಾಗಿ ವಿಕ್ರಮತೈಲ ಭೂಮಿದಾನ ನೀಡಿದ ವಿಚಾರವನ್ನು ಈ ಶಾಸನ ತಿಳಿಸುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹಟ್ಟಣದ (ಪಟ್ಟಣದ) ತೈಲನು ದೇವರಿಗೆ ಭೂಮಿ ಮತ್ತು ಹಣದಾನ ನೀಡಿದ್ದನ್ನು ಶಾಸನ ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಸ್ಪಷ್ಟವಾದ ತೇದಿಯ ಉಲ್ಲೇಖವಿಲ್ಲ. ಕೇವಲ ಮೀನದ ಬೃಹಸ್ಪತಿ ಎಂದು ಶಾಸನ ಮುಂದುವರೆಯುತ್ತದೆ. ಗುಂಡಬಾಳ ಮತ್ತು ತಂಬೊಳ್ಳಿಯಲ್ಲಿ ಈ ಮೊದಲು ದೊರೆತ ಶಾಸನಗಳ ಆಧಾರದಿಂದ ವಿಕ್ರಮ ತೈಲನ ಆಳ್ವಿಕೆ ಕ್ರಿ.ಶ. 1119 ರಿಂದ 1125 ಎಂದು ವಿದ್ವಾಂಸರು ಗುರುತಿಸಿದ್ದಾರೆ.
ತಿಗಳಾರಿ ಇದು ತಮಿಳು ಗ್ರಂಥ ಲಿಪಿ ಮತ್ತು ಮಳಯಾಳಂ ಲಿಪಿಗಳ ಮಧ್ಯಂತರದ ರೂಪವಾಗಿದೆ. ಇತರ ಭಾರತೀಯ ಲಿಪಿಗಳಂತೆ ತಿಗಳಾರಿ ಲಿಪಿಯು ಕೂಡ ಅಶೋಕನ ಬ್ರಾಹ್ಮೀ ಲಿಪಿಯಿಂದ ವಿಕಸಿತಗೊಂಡಿದೆ. ಈ ಲಿಪಿಯು ಬ್ರಾಹ್ಮಿಜನ್ಯ ಲಿಪಿಯಾದ ಗ್ರಂಥ ಲಿಪಿಯ ಮೂಲಕ ವಿಕಾಸವಾದಂತಹದ್ದು. ಸುಮಾರು 11-12ನೇ ಶತಮಾನದಲ್ಲಿ ತಮಿಳುನಾಡು-ಕೇರಳ ಪ್ರದೇಶದಿಂದ ಕರ್ನಾಟಕಕ್ಕೆ ಆಗಮಿಸಿತು ಎನ್ನುವ ಅಭಿಪ್ರಾಯ ವಿದ್ವಾಂಸರುಗಳದ್ದಾಗಿದೆ.
ಶಿಶುಗಲಿಯ ಪಾಂಡ್ಯರು ಹತ್ತನೇ ಶತಮಾನದ ಕೊನೆಯಿಂದ ಹನ್ನೆರಡನೇ ಶತಮಾನದ ಅಂತ್ಯದವರೆಗೆ ಹೈವೆಐನೂರು, ಕೊಂಕಣ ಒಂಭೈನೂರು, ಬನವಾಸಿ ಪನ್ನಿರ್ಚ್ಛಾಸಿರ, ಸಾಂತಳಿಗೆ ಸಾವಿರ ಪ್ರದೇಶಗಳನ್ನು ಕೆಲವೊಮ್ಮೆ ಪೂರ್ತಿಯಾಗಿ ಇನ್ನು ಕೆಲವೊಮ್ಮೆ ಭಾಗಶಃ ಆಳ್ವಿಕೆ ಮಾಡಿಕೊಂಡಿದ್ದ ಒಂದು ರಾಜಮನೆತನ. ಇವರಿಗೆ ಸಂಬಂಧಿಸಿದ ಒಟ್ಟು ಹದಿನಾರು ಶಾಸನಗಳು ನಮಗೆ ಈವರೆಗೆ ದೊರೆತಿವೆ. ಲಭ್ಯ ಆಧಾರಗಳ ಪ್ರಕಾರ ಮೊದಲನೇ ಚಂದ್ರ ಈ ವಂಶದ ಮೊದಲದೊರೆ ಎಂದು ವಿವರಿಸಿದರು. ಇದೇ ವೇಳೆ ಶಾಸನದ ಲಿಪ್ಯಂತರ ಮಾಡಿದ ಡಾ. ಅರ್ಪಿತಾ ಅಶೋಕ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!