ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದೊಂದಿಗೆ ನಿರಂತರ ಮಾತುಕತೆಯ ಯುಗ ಮುಗಿದಿದ್ದು, ಭಾರತ ವಿರೋಧಿ ಚಟುವಟಿಕೆಗಳಿಗೆ ಇನ್ನೇನಿದ್ದರೂ ತಕ್ಕ ಶಾಸ್ತಿ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ಲಾಮಾಬಾದ್ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಭಾರತದ ವಿರುದ್ಧ ಪಾಕಿಸ್ತಾನ ನಡೆದುಕೊಂಡರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿರುವುದು ಮುಗಿದ ಕಥೆಯಾಗಿದೆ ಎಂದರು.
ನೆರೆಯ ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್ ಜೊತೆಗಿನ ಬಾಂಧವ್ಯ ಬದಲಾಗುತ್ತಿರುವ ಕುರಿತು ಮಾತನಾಡಿದ ಅವರು, ಜಗತ್ತಿನ ಯಾವುದೇ ದೇಶವನ್ನು ನೋಡಿದರೆ ನೆರೆಯ ರಾಷ್ಟ್ರಗಳ ಸಮಸ್ಯೆಗಳು ಕಾಣುತ್ತವೆ. ನೆರೆಯ ರಾಷ್ಟ್ರಗಳೊಂದಿಗೆ ಸಮಸ್ಯೆ ಇಲ್ಲದ ದೇಶವಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಇತ್ತೀಚೆಗೆ ಬಾಂಗ್ಲಾದೇಶದ ಹಂಗಾಮಿ ಮುಖ್ಯ ಸಲಹೆಗಾರರೊಂದಿಗೆ ಮಾತನಾಡಿದ್ದಾರೆ ಮತ್ತು ಯೂನಸ್ ಅಲ್ಲಿನ ಹಿಂದುಗಳು ಮತ್ತು ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆ ನೀಡಿದ್ದಾರೆ ಎಂದು ಜೈಶಂಕರ್ ಹೇಳಿದರು.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೈಜ್ಜು ಅವರ ಅವಧಿಯಲ್ಲಿ ಮಾಲ್ಡೀವ್ಸ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ತಮ್ಮ ನೀತಿಯಲ್ಲಿ ಸ್ಥಿರತೆ ಮತ್ತು ಏರಿಳಿತದ ಕೊರತೆಯ ಹೊರತಾಗಿಯೂ, ಭಾರತವು ಆ ದೇಶದೊಂದಿಗೆ ಆಳವಾದ ಸಂಬಂಧವನ್ನು ಮುಂದುವರಿಸುತ್ತದೆ ಎಂದು ಹೇಳಿದರು.