ಹೊಸದಿಗಂತ ವರದಿ, ದಾವಣಗೆರೆ:
ಹಣ ದ್ವಿಗುಣದ ಆಸೆಯಿಂದ ಆಂಧ್ರಪ್ರದೇಶದ ಕರ್ನೂಲ್ ಸ್ಕಂದ ಶಾಪಿಂಗ್ ಮಾಲ್, ಓಲ್ಡ್ ಟಾಕೀಸ್ ವಿಳಾಸದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ 106 ಜನರು 4.79 ಕೋಟಿ ರೂ. ವಂಚನೆಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂಬುದಾಗಿ ನಂಬಿಸಿ 106 ಗ್ರಾಹಕರಿಂದ 4,79,99,000 ರೂ. ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ರಮೇಶಪ್ಪ ಎಂಬುವರು ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ದಾವಣಗೆರೆ ಸಿಐಡಿ, ಸಿಐಯು ಘಟಕದಿಂದ ತನಿಖೆ ನಡೆಯುತ್ತಿದೆ.
ರಮೇಶಪ್ಪನಿಗೆ ಪರಿಚಯಸ್ಥರಾದ ಟಿ.ವಿ.ಶೇಷಯ್ಯ ಮತ್ತು ಎಂ.ಏಳುಕೊಂಡಲು ಅವರುಗಳು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ತಿಳಿಸಿ, ಕಂಪನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿದ್ದರು. 60 ದಿನಗಳ ನಂತರ ರಮೇಶಪ್ಪ 1,96,000 ರೂ.ಗಳನ್ನು ವಾಪಸ್ ಪಡೆದಿದ್ದರು. ಇಟ್ಟ ಠೇವಣಿಗೆ ಬಾಂಡ್ ಪೇಪರ್ ಮೇಲೆ ಅಗ್ರಿಮೆಂಟ್ ಸಹ ನೀಡಿದ್ದರು. ಇದನ್ನು ನಂಬಿದ ರಮೇಶಪ್ಪ ತವ್ಮ್ಮ ಸ್ನೇಹಿತರು ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರಿಗೆ ತಿಳಿಸಿ, ಒಟ್ಟು 106 ಜನರಿಂದ 4,79,99,000 ರೂ. ಹೂಡಿಕೆ ಮಾಡಿಸಿದ್ದರು. ಈ ಮೊತ್ತಕ್ಕೆ 60 ದಿನಗಳ ನಂತರವೂ ಯಾವುದೇ ಹಣ ವಾಪಸ್ ಬಂದಿಲ್ಲ. ಹೀಗಾಗಿ ಇಷ್ಟೂ ಜನ ಗ್ರಾಹಕರು ಕಂಪನಿಯನ್ನು ನಂಬಿ ಮೋಸ ಹೋಗಿದ್ದಾರೆ.
ಪ್ರಸ್ತುತ ಪ್ರಕರಣವು ದಾವಣಗೆರೆ ಸಿಐಡಿ, ಸಿಐಯು ಘಟಕದಲ್ಲಿ ತನಿಖೆ ಹಂತದಲ್ಲಿದೆ. ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಸ್ಥಿರ ಮತ್ತು ಚರ ಆಸ್ತಿಗಳಿರುವುದು ತಿಳಿದು ಬಂದಿದೆ. ಯಾರಿಗಾದರೂ ಈ ಸಂಸ್ಥೆಯ ಹೆಸರಿನಲ್ಲಿ ಆಸ್ತಿ ಇರುವುದು ಗೊತ್ತಿದ್ದಲ್ಲಿ ಮತ್ತು ಕಂಪನಿಯಿಂದ ಮೋಸ ಹೋಗಿದ್ದಲ್ಲಿ ಮೊ:94808 00192 ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಉಪಾಧೀಕ್ಷಕ ಮಾಲತೇಶ್ ಎನ್.ಕೂನಬೇವು ಕೋರಿದ್ದಾರೆ.