Monday, December 1, 2025

ಟಿಪ್ಪರ್-ಟಾಟಾ ಮ್ಯಾಜಿಕ್ ದುರಂತ: ಚಾಲಕ ಸೇರಿ ಇಬ್ಬರು ಸಾವು, 12 ಜನರಿಗೆ ಗಂಭೀರ ಗಾಯ

ಹೊಸದಿಗಂತ ಬೀದರ್:

ಜಿಲ್ಲೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಾಟಾ ಮ್ಯಾಜಿಕ್ ವಾಹನ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸುಮಾರು 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ರವಿವಾರದಂದು ವರದಿಯಾಗಿದೆ.

ಘಟನೆ ವಿವರ:

ರಾಜೇಶ್ವರದಿಂದ ಬಸವಕಲ್ಯಾಣದಲ್ಲಿರುವ ದರ್ಗಾದತ್ತ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಟಾಟಾ ಮ್ಯಾಜಿಕ್ ವಾಹನವು ಬಸವಕಲ್ಯಾಣ ತಾಲೂಕಿನ ಮುಡಬಿ ಕ್ರಾಸ್ ಬಳಿ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮ್ಯಾಜಿಕ್ ವಾಹನದ ಚಾಲಕ ಹಾಗೂ ಇನ್ನೊಬ್ಬ ಪ್ರಯಾಣಿಕರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಡಿಕ್ಕಿಯ ಪರಿಣಾಮವಾಗಿ ವಾಹನದಲ್ಲಿದ್ದ 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಬಸವಕಲ್ಯಾಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಸಂಬಂಧ ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತಕ್ಕೆ ನಿಖರ ಕಾರಣಗಳ ಕುರಿತು ತನಿಖೆ ಮುಂದುವರೆಸಿದ್ದಾರೆ.

error: Content is protected !!