ಭಾರತೀಯ ಊಟದ ತಟ್ಟೆಯಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಆ ಊಟವೇ ಅಪೂರ್ಣ. ಮಾವಿನಕಾಯಿ, ಲಿಂಬೆಹಣ್ಣು, ನೆಲ್ಲಿಕಾಯಿ ಹೀಗೆ ಬಗೆಬಗೆಯ ಉಪ್ಪಿನಕಾಯಿಗಳನ್ನು ವರ್ಷಪೂರ್ತಿ ಬಳಕೆಯಾಗುವಂತೆ ಮನೆಯಲ್ಲೇ ತಯಾರಿಸಿ ಇಡುವುದು ನಮ್ಮ ಸಂಪ್ರದಾಯ. ಆದರೆ, ಸರಿಯಾದ ಜಾಗರೂಕತೆ ವಹಿಸದಿದ್ದರೆ ಉಪ್ಪಿನಕಾಯಿ ಬೇಗನೆ ಬೂಸ್ಟ್ ಬಂದು ಕೆಟ್ಟುಹೋಗುತ್ತದೆ. ಉಪ್ಪಿನಕಾಯಿ ವರ್ಷಗಳ ಕಾಲ ತಾಜಾವಾಗಿ ಮತ್ತು ರುಚಿಯಾಗಿರಲು ಅನುಸರಿಸಬೇಕಾದ ಟಿಪ್ಸ್ ಬಗ್ಗೆ ತಿಳಿಯೋಣ.
ಸರಿಯಾದ ಪ್ರಮಾಣದ ಉಪ್ಪು ಮತ್ತು ಎಣ್ಣೆ:
ಉಪ್ಪಿನಕಾಯಿ ದೀರ್ಘಕಾಲ ಬಾಳಿಕೆ ಬರಲು ಉಪ್ಪು ಮತ್ತು ಎಣ್ಣೆ ನೈಸರ್ಗಿಕ ಪ್ರೆಸರ್ವೇಟಿವ್ಸ್ ಆಗಿ ಕೆಲಸ ಮಾಡುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಉಪ್ಪಿನ ಪ್ರಮಾಣ ಕಡಿಮೆ ಇರಬಾರದು. ಹಾಗೆಯೇ, ಉಪ್ಪಿನಕಾಯಿಯನ್ನು ಬರಣಿಗೆಗೆ ಹಾಕಿದ ನಂತರ ಅದರ ಮೇಲ್ಭಾಗದಲ್ಲಿ ಕನಿಷ್ಠ ಒಂದು ಇಂಚಿನಷ್ಟು ಎಣ್ಣೆ ತೇಲುತ್ತಿರಬೇಕು. ಇದು ಗಾಳಿಯು ಉಪ್ಪಿನಕಾಯಿಯ ಸಂಪರ್ಕಕ್ಕೆ ಬರದಂತೆ ತಡೆದು ಬೂಸ್ಟ್ ಬರದಂತೆ ಕಾಯುತ್ತದೆ.
ತೇವಾಂಶದಿಂದ ದೂರವಿಡಿ:
ಉಪ್ಪಿನಕಾಯಿ ಹಾಳಾಗಲು ಪ್ರಮುಖ ಕಾರಣ ತೇವಾಂಶ. ಉಪ್ಪಿನಕಾಯಿ ತಯಾರಿಸಲು ಬಳಸುವ ಕಾಯಿಗಳು, ಮಸಾಲೆ ಪದಾರ್ಥಗಳು ಸಂಪೂರ್ಣವಾಗಿ ಒಣಗಿರಬೇಕು. ಕಾಯಿಗಳನ್ನು ತೊಳೆದ ನಂತರ ಬಟ್ಟೆಯಿಂದ ಒರೆಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಉಪ್ಪಿನಕಾಯಿ ಇಡುವ ಜಾರ್ ಮತ್ತು ಬಳಸುವ ಚಮಚಗಳೂ ಕೂಡ ಸಂಪೂರ್ಣವಾಗಿ ಡ್ರೈ ಆಗಿರಬೇಕು.
ಗಾಜಿನ ಅಥವಾ ಮಣ್ಣಿನ ಬರಣಿ ಬಳಸಿ:
ಉಪ್ಪಿನಕಾಯಿಯನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸಬಾರದು. ಇವುಗಳಲ್ಲಿರುವ ಆಮ್ಲೀಯತೆ ಲೋಹದೊಂದಿಗೆ ವರ್ತಿಸಿ ಉಪ್ಪಿನಕಾಯಿ ಬೇಗನೆ ಹಾಳಾಗುವಂತೆ ಮಾಡುತ್ತದೆ. ಯಾವಾಗಲೂ ಗಾಜಿನ ಸೀಸೆ ಅಥವಾ ಮಣ್ಣಿನ ಬರಣಿಗಳನ್ನು ಬಳಸಬೇಕು. ಇವುಗಳನ್ನು ಬಳಸುವ ಮುನ್ನ ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿರಬೇಕು.
ಚಮಚಗಳ ಬಳಕೆ ಮತ್ತು ಸ್ವಚ್ಛತೆ:
ಬರಣಿಯಿಂದ ಉಪ್ಪಿನಕಾಯಿ ತೆಗೆಯುವಾಗ ಯಾವುದೇ ಕಾರಣಕ್ಕೂ ಕೈ ಬಳಸಬಾರದು. ಯಾವಾಗಲೂ ಸಂಪೂರ್ಣವಾಗಿ ಒಣಗಿದ ಸ್ಟೀಲ್ ಅಥವಾ ಮರದ ಚಮಚವನ್ನೇ ಬಳಸಬೇಕು. ಒಮ್ಮೆ ಬಳಸಿದ ಚಮಚವನ್ನು ಮತ್ತೆ ಬರಣಿಯೊಳಗೆ ಇಡಬಾರದು.
ಸಂಗ್ರಹಿಸುವ ಜಾಗ:
ಉಪ್ಪಿನಕಾಯಿ ಬರಣಿಯನ್ನು ನೇರ ಸೂರ್ಯನ ಬೆಳಕು ಬೀಳದ, ತಂಪಾದ ಮತ್ತು ಒಣಗಿದ ಜಾಗದಲ್ಲಿ ಇಡಬೇಕು. ತೇವಾಂಶವಿರುವ ಜಾಗ ಅಥವಾ ಸಿಂಕ್ ಹತ್ತಿರ ಇಡಬಾರದು. ದೊಡ್ಡ ಬರಣಿಯಿಂದ ಪದೇ ಪದೇ ಉಪ್ಪಿನಕಾಯಿ ತೆಗೆಯುವ ಬದಲು, ತಿಂಗಳ ಬಳಕೆಗೆ ಬೇಕಾಗುವಷ್ಟನ್ನು ಸಣ್ಣ ಸೀಸೆಗೆ ವರ್ಗಾಯಿಸಿಕೊಂಡು ಬಳಸುವುದು ಉತ್ತಮ.



