ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣ್ಣುಗಳ ರಾಜ ಮಾವು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇದೀಗ ಮಾವಿನ ಹಣ್ಣಿನ ಸೀಸನ್..ಎಲ್ಲಾ ಫ್ರೂಟ್ ಸ್ಟಾಲ್‌ಗಳಲ್ಲಿ,ರಸ್ತೆ ಬದಿಯಲ್ಲಿ, ಮಾರುಕಟ್ಟೆಯಲ್ಲಿ ರಾಶಿ ರಾಶಿ ವೈವಿಧ್ಯಮಯ ಮಾವು ಕಾಣಸಿಗುತ್ತವೆ. ಹಳದಿ, ಕೆಂಪು, ಬಣ್ಣದ ದೊಡ್ಡ ದೊಡ್ಡ ಗಾತ್ರದ ಮಾವಿನ ಹಣ್ಣು ನೋಡುತ್ತಲೇ ಬಾಯಲ್ಲಿ ನೀರೂರುತ್ತೆ. ಹಾಗಂತ ಸೀದಾ ಹಣ್ಣು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಖಂಡಿತ.
ಈ ಮಾವಿನ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾದವುಗಳೇ ಅಥವಾ ರಾಸಾಯನಿಕ ಬಳಸಿ ಹಣ್ಣು ಮಾಡಲ್ಪಟ್ಟದ್ದೇ ಎಂಬುದು ಬಹುಮುಖ್ಯ ಅಂಶ. ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಚೆನ್ನಾಗಿ ಮಾಗುವಂತೆ ಮಾಡಲು ಮಾವಿನ ಕಾಯಿಗೆ ಕ್ಯಾಲ್ಸಿಯಂ ಕಾರ್ಬೈಡ್ ಚುಚ್ಚಲಾಗುತ್ತದೆ. ತೇವಾಂಶದೊಂದಿಗೆ ಸಂಪರ್ಕಕ್ಕೆ ಬಂದಾಗ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಮಾವಿನಹಣ್ಣುಗಳು ಬೇಗನೆ ಹಣ್ಣಾಗುವಂತೆ ಮಾಡುತ್ತದೆ. ಈ ರಾಸಾಯನಿಕ ನಮ್ಮ ಚರ್ಮಕ್ಕೆ ನೇರವಾಗಿ ಸೇರಿದರೆ ಅನೇಕ ತೊಂದರೆ ಉಂಟಾಗುತ್ತವೆ. ಚರ್ಮದ ತೊಂದರೆ, ಉಸಿರಾಟದ ತೊಂದರೆಗಳು ಮತ್ತು ಜಠರಗರುಳಿನ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು.
ಮಾವಿನ ಕಾಯಿಗಳನು ಎಥಿಲೀನ್ ಅನಿಲಕ್ಕೆ ಒಡ್ಡುವ ಮೂಲಕವೂ ಮಾವು ಮಾಗುವಂತೆ ಮಾಡಲಾಗುತ್ತದೆ. ಇದು ಕೂಡಾ ಆರೋಗ್ಯಕ್ಕೆ ಹಾನಿಕಾರಕ. ನೀವು ಮಾವು ಖರೀದಿಸುವಾಗ ಮಾವಿನ ಹಣ್ಣಿನ ಬಣ್ಣ ನೋಡಲು ಮರೆಯದಿರಿ. ರಾಸಾಯನಿಕ ಉಪಯೋಗಿಸಿ ಹಣ್ಣನ್ನು ಮಾಗಿಸಿದ್ದರೆ ಅದರ ಮೇಲೆ ಹಸಿರು ಚುಕ್ಕೆಗಳಿರುತ್ತವೆ. ರಾಸಾಯನಿಕವಾಗಿ ಮಾಗಿಸಿದ ಹಣ್ಣುಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ರಸ ಸೋರುತ್ತಿರುತ್ತವೆ. ಮಾವಿನ ಹಣ್ಣನ್ನು ಒಂದು ಬಕೆಟ್ ನೀರಿನಲ್ಲಿ ಮುಳುಗಿಸಿ. ನೀರಿನಲ್ಲಿ ಮುಳುಗಿರುವ ಹಣ್ಣುಗಳನ್ನು ಖರೀದಿಸಬಹುದು. ಅದು ಸ್ವಾಭಾವಿಕವಾಗಿ ಹಣ್ಣಾದವುಗಳಾಗಿರುತ್ತವೆ. ನೀರಿನ ಮೇಲೆ ತೇಲುವಂತದ್ದು ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳಾಗಿರುತ್ತವೆ. ಹಣ್ಣನ್ನು ಒತ್ತಿನೋಡಿ ನೈಸರ್ಗಿಕವಾಗಿ ಹಣ್ಣಾಗಿರುವುದು ಮೃದುವಾಗಿರುತ್ತದೆ. ರಾಸಾಯನಿಕ ಬಳಸಿ ಹಣ್ಣುಮಾಡಿರುವುದು ಗಟ್ಟಿಯಾಗಿರುತ್ತವೆ.