ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಮತ್ತು ಬೆವರಿನಿಂದ ಕೂಡಿದ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು ಸೋಂಕು ತಡೆಯಲು ಮೊದಲ ಮೆಟ್ಟಿಲು. ಸ್ನಾನದ ನಂತರ ಚರ್ಮವನ್ನು ಪೂರ್ಣವಾಗಿ ಒಣಗಿಸಿಕೊಳ್ಳಿ, ವಿಶೇಷವಾಗಿ ಬೆರಳುಗಳ ಮಧ್ಯೆ ಮತ್ತು ಮಡಿಕೆಗಳಿರುವ ಜಾಗದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ.
ಬಿಗಿಯಾದ ಮತ್ತು ಸಿಂಥೆಟಿಕ್ ಬಟ್ಟೆಗಳಿಗಿಂತ ಗಾಳಿಯಾಡುವ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಇದು ಬೆವರಿನಿಂದ ಉಂಟಾಗುವ ಶಿಲೀಂಧ್ರ ಸೋಂಕನ್ನು ಕಡಿಮೆ ಮಾಡುತ್ತದೆ.
ನಿಮ್ಮ ಟವೆಲ್, ಸೋಪು, ಬಾಚಣಿಗೆ ಅಥವಾ ಒಳ ಉಡುಪುಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಬೇಡ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಯಲು ಸಹಕಾರಿ.
ಗುಣಮಟ್ಟವಿಲ್ಲದ ಅಥವಾ ಎಕ್ಸ್‌ಪೈರಿ ಆದ ಮೇಕಪ್ ಉತ್ಪನ್ನಗಳನ್ನು ಬಳಸಬೇಡಿ. ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆಯುವುದನ್ನು ಮರೆಯಬೇಡಿ.
ಹೆಚ್ಚು ನೀರು ಕುಡಿಯುವುದು ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.



