ಹೊಸದಿಗಂತ ಕಲಬುರಗಿ:
ಜಿಲ್ಲೆಯ ಜೇವರ್ಗಿ ಪಟ್ಟಣದ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿ ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಖಂಡಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಜೇವರ್ಗಿ ಬಂದ್ ಬೆಳಿಗ್ಗೆಯಿಂದಲೇ ಆರಂಭವಾಗಿದೆ.
ಪಟ್ಟಣದ ಪ್ರಮುಖ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದು, ಬಾಲಕಿಗೆ ಕಿರುಕುಳ ನೀಡಿ,ಆಕೆಯ ಆತ್ಮಹತ್ಯೆಗೆ ಕಾರಣವಾದ ಮೆಹಬೂಬ್ ಮುಲ್ಲಾ ಆತನಿಗೆ ಬಂಧಿಸಿದರೇ ಸಾಲದು, ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂಬುದು ಪ್ರತಿಭಟನಾಕಾರರ ಕೂಗಾಗಿದೆ.
ಇನ್ನೂ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಜೇವರ್ಗಿ ಬಂದ್, ಕರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಭಾರತೀಯ ಜನತಾ ಪಕ್ಷ, ವಿವಿಧ ಹಿಂದೂ ಪರ ಸಂಘಟನೆಗಳು, ಲಿಂಗಾಯತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.