ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಮತ್ತೆ ಅನ್ಯಾಯ ಆಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.
ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಪದೇಪದೆ ರಾಜ್ಯಕ್ಕೆ ಅನ್ಯಾಯವಾಗ್ತಿದೆ. ಯಾಕೆ ಹೀಗೆ ಆಗ್ತಿದೆ ಗೊತ್ತಿಲ್ಲ. ನಮಗೀಗ ಸುಪ್ರೀಂ ಆದೇಶ ಪಾಲಿಸುವ ಅನಿವಾರ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಮಾತನಾಡಲ್ಲ. ಕಾವೇರಿ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡಲು ಆಗಲ್ಲ. ರೈತರಿಗೆ ಅನ್ಯಾಯ ಆಗಿದೆ. ಏನು ಉತ್ತರ ಕೊಡುವುದು? ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡಬೇಕು ಎಂದರು.
ಇಂದು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳ ಮಾತು ಕೇಳಿದ್ರೆ ಮತ್ತಷ್ಟು ಆತಂಕ ಆಗುತ್ತದೆ. ಕೃಷಿಗೆ ಇರಲಿ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.
ಸಿಎಂ ಕರೆದಿದ್ದ 3 ಸಭೆಗೂ ನಾನು ಹೋಗಿದ್ದೇನೆ. ನನಗೆ ಇದ್ದ ಅನುಮಾನಗಳಿಗೆ ಕ್ಲಾರಿಟಿ ಕೇಳಿದ್ದೇವೆ. ಸುಪ್ರೀಂ ಮುಂದೆ ವಾಸ್ತವ ಮನವರಿಕೆ ಮಾಡಲು ವಿಫಲವಾಗ್ತಿದ್ದೇವೆ. ಬೇರೆ ರಾಜ್ಯದ ಅಧಿಕಾರಿಗಳ ಪ್ರಾಧಿಕಾರ ಸಭೆಗೆ ಹೋಗ್ತಾರೆ. ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕಾಲ್ ಮೂಲಕ ಭಾಗವಹಿಸುತ್ತಾರೆ. ಹೀಗೇ ಮಾಡಿದ್ರೆ ಅದರ ಪರಿಣಾಮ ಏನಿರುತ್ತದೆ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಇಂತಹ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಇರಲಿ ರಾಜ್ಯ ಸರ್ಕಾರ ಇರಲಿ ಮಧ್ಯಪ್ರವೇಶ ಮಾಡಲು ಆಗಲ್ಲ. ಆದರೆ ಎರಡು ರಾಜ್ಯಗಳು ಪರಸ್ಪರ ಕುಳಿತು ಮಾತಮಾಡಿ ಬಗೆಹರಿಸಿಕೊಳ್ಳಬಹುದು.ಲೀಗಲ್ ಆಕ್ಷನ್ ಆಗಲ್ಲ ಎಂದರೆ ಮಾತನಾಡಿ ಬಗೆಹರಿಸಬಹುದು. ಆದರೆ ನೀರು ಕೊಡಲ್ಲ ಎನ್ನಲಾಗಲ್ಲ ಆದರೆ ನಮ್ಮ ಅಗತ್ಯತೆಯನ್ನು ನೋಡಬೇಕು. ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆ ಮಾತನಾಡಿ ಬಗೆಹರಿಸಿಕೊಳ್ತಾರೆ. ಅದೇ ರೀತಿ ತಮಿಳುನಾಡು ಜೊತೆ ಯಾಕೆ ಮಾತನಾಡಲು ಆಗಲ್ಲ. ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಸರ್ಕಾರ ಮಾಡಬೇಕು. ಕಾವೇರಿ ವಿಚಾರ ಮಾತನಾಡು ಪಾರ್ಲಿಮೆಂಟ್‌ನಲ್ಲಿ ಅವಕಾಶ ಕೇಳಿದ್ದೇನೆ. ರೈತರ ಸಮಸ್ಯೆ ಬಗ್ಗೆ ಆದ್ಯತೆ ಮೇರೆಗೆ ಮಾತನಾಡಿದ್ದೇನೆ ಎಂದರು.
ಕಾವೇರಿಗಾಗಿ ಅಂಬರೀಶ್ ರಾಜೀನಾಮೆ ನೀಡಿದ್ದರು
ಅಂಬರೀಶ್ ಕಾವೇರಿ ವಿಚಾರದಲ್ಲಿ ರಾಜಿನಾಮೆ ನೀಡಿದ್ರು. ಅದೇ ಹಾದಿಯಲ್ಲಿ, ನನ್ನ ವ್ಯಾಪ್ತಿಯಲ್ಲಿ ನಾನು ಏನು ಮಾಡಬಹುದು ಮಾಡ್ತೀನಿ. ರೈತರ ಸಲಹೆಗಳನ್ನು ಕೇಳ್ತೀನಿ. ರಾಜಕೀಯ ಬೆರೆಸದೆ ಈ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲಲು ಸಿದ್ಧ.ಇದು ಒಬ್ಬರ ಜವಾಬ್ದಾರಿ ಅಲ್ಲ ನಮ್ಮೆಲ್ಲರ ಜವಾಬ್ದಾರಿ. ರಾಜೀನಾಮೆ ವಿಚಾರ ಮಾತನಾಡುವ ಸಮಯವಲ್ಲ, ನಮ್ಮ ಜನರು ಮುಗ್ದರು ಇದ್ದಾರೆ ಮಾಹಿತಿ ಇರಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಲು ಸಾಧ್ಯವಿಲ್ಲ.ಕೇಂದ್ರದ ಬಳಿ ಕೀ ಇದ್ದಿದ್ದರೆ ಈ ಹಿಂದೆ ಯಾಕೆ ಅಂಬರೀಶ್ ಯಾಕೆ ರಾಜೀನಾಮೆ ಕೊಡುತ್ತಿದ್ದರು. ಮಂಡ್ಯ ಜಿಲ್ಲೆಯ ಜನ ನನಗೆ ಮತ ಹಾಕಿದ್ದಾರೆ. ನನಗೆ ಜವಬ್ದಾರಿ ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜೀನಾಮೆ ಕೊಡಲು 2 ಸೆಕೆಂಡ್ ಕೂಡ ಯೋಚನೆ ಮಾಡುವುದಿಲ್ಲ.