ತಿರುಪತಿ ಲಡ್ಡು ವಿವಾದ: ಅಯೋಧ್ಯೆ, ಪ್ರಯಾಗ್ ರಾಜ್ ದೇವಾಲಯಗಳಲ್ಲಿ ಮಿಠಾಯಿ ನೈವೇದ್ಯಕ್ಕೆ ನಿರ್ಬಂಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ವಿವಾದ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಯೋಧ್ಯೆ, ಪ್ರಯಾಗ್ ರಾಜ್ ನ ದೇವಾಲಯದ ಅಧಿಕಾರಿಗಳು, ಮಿಠಾಯಿ ನೈವೇದ್ಯಗಳಿಗೆ ಬ್ರೇಕ್ ಹಾಕಿದ್ದಾರೆ.

ಭಕ್ತಾದಿಗಳಿಗೆ ಸಿಹಿ ತಿನಿಸುಗಳು ಹಾಗೂ ಮಿಠಾಯಿಗಳಂತಹ ಸಂಸ್ಕರಿಸಿದ ಪದಾರ್ಥಗಳನ್ನು ದೇವಾಲಯಕ್ಕೆ ತರುವುದಕ್ಕೆ ನಿರ್ಬಂಧ ವಿಧಿಸಿರುವ ಅಧಿಕಾರಿಗಳು, ಇವುಗಳ ಬದಲಿಗೆ ತೆಂಗಿನಕಾಯಿ, ಹಣ್ಣು ಹಾಗೂ ಡ್ರೈ ಫ್ರೂಟ್ಸ್ ಗಳನ್ನು ತರುವಂತೆ ಸಲಹೆ ನೀಡಿದ್ದಾರೆ.

ಸಂಗಮ ನಗರದಲ್ಲಿರುವ ಅಲೋಪ್ ಶಂಕರಿ ದೇವಿ, ಬಡೇ ಹನುಮಾನ್, ಮನ್ ಕಾಮೇಶ್ವರ್ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಸಿಹಿ ತಿನಿಸುಗಳು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ದೇವಾಲಯಕ್ಕಾಗಿ ತರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರಯಾಗ್‌ರಾಜ್‌ನ ಪ್ರಸಿದ್ಧ ಲಲಿತಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಿವ ಮುರತ್ ಮಿಶ್ರಾ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ ದೇವಸ್ಥಾನದಲ್ಲಿ ದೇವಿಗೆ ಸಿಹಿ ಪ್ರಸಾದ ನೀಡುವುದನ್ನು ನಿರ್ಬಂಧಿಸಲು ನಿರ್ಧರಿಸಲಾಗಿದ್ದು, ತೆಂಗಿನಕಾಯಿ, ಹಣ್ಣು, ಡ್ರೈಫ್ರೂಟ್ಸ್, ಏಲಕ್ಕಿಯನ್ನು ಅರ್ಪಿಸಲು ಭಕ್ತರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಭಕ್ತಾದಿಗಳಿಗೆ ಶುದ್ಧ ಸಿಹಿತಿಂಡಿಗಳು ಲಭ್ಯವಾಗುವಂತೆ ದೇವಸ್ಥಾನದ ಆವರಣದಲ್ಲಿಯೇ ಅಂಗಡಿಗಳನ್ನು ತೆರೆಯುವ ಯೋಜನೆ ಇದೆ. ಭಕ್ತರು ಹೊರಗಿನಿಂದ ಸಿಹಿತಿಂಡಿ ಮತ್ತು ಪ್ರಸಾದ ತರುವುದನ್ನು ನಿಷೇಧಿಸಲಾಗಿದೆ ಎಂದು ಆಲೋಪ್ ಶಂಕರಿ ದೇವಿ ದೇವಸ್ಥಾನದ ಪ್ರಧಾನ ಧರ್ಮದರ್ಶಿ ಹಾಗೂ ಶ್ರೀ ಪಂಚಾಯಿತಿ ಅಖಾರ ಮಹಾನಿರ್ವಾಣಿಯ ಕಾರ್ಯದರ್ಶಿ ಯಮುನಾ ಪುರಿ ಮಹಾರಾಜ್ ತಿಳಿಸಿದ್ದಾರೆ.

ಯಮುನಾ ದಡದಲ್ಲಿರುವ ಮನ್ ಕಾಮೇಶ್ವರ ದೇಗುಲದ ಮಹಂತ್ ಶ್ರೀಧರಾನಂದ ಬ್ರಹ್ಮಚಾರಿ ಜಿ ಮಹಾರಾಜ್ ಮಾತನಾಡಿ, ತಿರುಪತಿ ವಿವಾದದ ನಂತರ ಮನ್ ಕಾಮೇಶ್ವರ ದೇವಸ್ಥಾನಕ್ಕೆ ಹೊರಗಿನಿಂದ ಪ್ರಸಾದ ತರುವುದನ್ನು ನಿಷೇಧಿಸಿದ್ದೇವೆ. ಲಡ್ಡು-ಪೇಡಾ ಪಡೆಯಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ದೇವಾಲಯದ ಹೊರಗಿನ ಅಂಗಡಿಗಳಲ್ಲಿ ಲಭ್ಯವಿದ್ದು, ತನಿಖೆಯಲ್ಲಿ ಸಿಹಿತಿಂಡಿಗಳ ಶುದ್ಧತೆ ಸ್ಪಷ್ಟವಾಗುವವರೆಗೆ, ಅವುಗಳನ್ನು ದೇವಸ್ಥಾನದಲ್ಲಿ ನೀಡಲು ಅನುಮತಿಸಲಾಗುವುದಿಲ್ಲ, ನಾವು ಸಿಹಿತಿಂಡಿಗಳಿಗಿಂತ ಹೆಚ್ಚು ಹಣ್ಣುಗಳನ್ನು ನಂಬುತ್ತೇವೆ ಎಂದು ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!