Tuesday, July 5, 2022

Latest Posts

ರಾಹುಲ್ ಗೆ ಇಡಿ ನೋಟಿಸ್ ಖಂಡಿಸಿ ಕಾಂಗ್ರೆಸ್ ರಾಜಭವನ ಮುತ್ತಿಗೆ ಖಂಡನೀಯ: ಸಚಿವ ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ರಾಜಭವನ ಮುತ್ತಿಗೆ ಹಾಕಲು ಹೊರಟಿರುವುದು ಖಂಡನೀಯ, ಕಾಂಗ್ರೆಸ್​ನ ಅನೇಕರಿಗೆ ಇಡಿ ನೋಟಿಸ್ ನೀಡಿದಾಗ ಇಲ್ಲದ ಪ್ರತಿಭಟನೆ ಈಗೇಕೆ? ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ರಾಜಭವನಕ್ಕೆ ಬೇಕಾದರೂ ಮುತ್ತಿಗೆ ಹಾಕಲಿ ಎಲ್ಲಿಯಾದರೂ ಹಾಕಿಕೊಳ್ಳಲಿ. ರಾಜಭವನದ ಮೇಲೆ ಮುತ್ತಿಗೆ ಹಾಕುವುದರಿಂದ ಯಾವುದೇ ಲಾಭ ಇಲ್ಲ. ಸಾವಿರಾರು ಜನ ನಾಗರೀಕರಿಗೆ ನೋಟಿಸ್ ಹೋಗಿದೆ. ಅಲ್ಲದೇ, ಕಾಂಗ್ರೆಸ್‌ನಲ್ಲಿರುವ ಅನೇಕರಿಗೂ ಇಡಿ ನೋಟಿಸ್ ಹೋಗಿದೆ. ಆಗ್ಯಾಕೆ ಹೋರಾಟ ಮಾಡಲಿಲ್ಲ. ಈಗ ರಾಹುಲ್ ಗಾಂಧಿ ಸರದಿ ಬಂದಾಗ ಮುತ್ತಿಗೆ, ಪ್ರತಿಭಟನೆ ಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ಇಡಿ ನೋಟಿಸ್​ನಿಂದಾಗಿ ಕಾಂಗ್ರೆಸ್ ನಾಯಕರು ಹತಾಶೆರಾಗಿದ್ದಾರೆ. ರಾಹುಲ್ ಗಾಂಧಿ ದಿನನಿತ್ಯ ಇಡಿ ಡ್ರಿಲ್​​ಗೆ ಸಿಲುಕಿದ್ದಾರೆ. ನಮ್ಮ ನಾಯಕರೇ ಹೋದರೆ, ನಮಗೆ ದಿಕ್ಕಿಲ್ಲ ಅನ್ನೋ ರೀತಿ ಅವರಿಗೆಲ್ಲಾ ಆಗಿದೆ. ಅದಕ್ಕಾಗಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಜನರ ಹಣದಿಂದ ಮಾಡಿರುವ ಪತ್ರಿಕೆ. ಪತ್ರಿಕೆಯ ಶೇ.80ರಷ್ಟು ಹಣ ಇವರ ಕುಟುಂಬ ಪಡೆಯುತ್ತಿದೆ. ನೆಪಮಾತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಮತ್ತಿಬ್ಬರನ್ನು ಸೇರಿಕೊಂಡಿದ್ದಾರೆ. ಆದರೆ ಈಗ ಇಡಿ ತನಿಖೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಮೇಲೆ ಇಲ್ಲ-ಸಲ್ಲದ್ದನ್ನ ಹೇಳಿ, ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss