Sunday, October 1, 2023

Latest Posts

ಮಾವನ ಮನೆಗೆ ನುಗ್ಗಿ ಹಲ್ಲೆ: ಚಿನ್ನಾಭರಣದೊಂದಿಗೆ ಮಕ್ಕಳನ್ನೂ ಎಳೆದೊಯ್ದ ಅಳಿಯ!

ಹೊಸ ದಿಗಂತ ವರದಿ, ಸುಂಟಿಕೊಪ್ಪ:

ಹಾಡಹಗಲೇ ಮಾವನ ಮನೆಗೆ ಅಕ್ರಮ ಪ್ರವೇಶ ಮಾಡಿದ ಅಳಿಯನೊಬ್ಬ ಮಹಿಳೆಯರ ಮೇಲೆ ಹಲ್ಲೆ ನಡೆಸಿ ನಗದು, ಚಿನ್ನಾಭರಣ ಅಪಹರಿಸುವುದರೊಂದಿಗೆ ಎರಡು ಪುಟ್ಟ ಹೆಣ್ಣು ಮಕ್ಕಳನ್ನೂ ಹೊತ್ತೊಯ್ದಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಸುಂಟಿಕೊಪ್ಪ ನಾರ್ಗಾಣೆ ಗ್ರಾಮದ ಗದ್ದೆಹಳ್ಳದ ನಿವಾಸಿ ಎ. ಮೂಸಾ ಅವರ ಮನೆಗೆ ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ರಫೀಕ್ ಎಂಬಾತ ಮುಸುಕುಧಾರಿ ಮಹಿಳೆಯೊಬ್ಬರೊಂದಿಗೆ ಏಕಾಏಕಿ ಆಕ್ರಮ ಪ್ರವೇಶ ಮಾಡಿ ಮೂಸಾ ಅವರ ಪತ್ನಿ ಫಾತೀಮಾ ಅವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ 25,000 ರೂ. ನಗದು, 4 ಪವನ್ ಚಿನ್ನವನ್ನು ಅಪಹರಿಸಿ, ಇಬ್ಬರು ಪುಟ್ಟ ಮಕ್ಕಳನ್ನು ಬಲವಂತವಾಗಿ ಎಳೆದೊಯ್ದು ಬಿಳಿಯ ಕಾರಿನಲ್ಲಿ ಪರಾರಿಯಾಗಿರುವುದಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೂಸಾ ಅವರು ದೂರು ಸಲ್ಲಿಸಿದ್ದಾರೆ.
ಮೂಸಾ ಅವರಿಗೆ ಎರಡು ಗಂಡು ಹಾಗೂ ಓರ್ವ ಪುತ್ರಿಯಿದ್ದು, ಮಗಳಾದ ರಿಜ್ವಾನ್ ಫಾತೀಮಾ ಅವರನ್ನು ಸುಂಟಿಕೊಪ್ಪ ಮಧುರಮ್ಮ ಬಡಾವಣೆ ನಿವಾಸಿ ರಫೀಕ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ರಿಜ್ವಾನ್ ಫಾತೀಮಾ 2 ನೇ ಹೆಣ್ಣು ಮಗುವಿಗೆ ಮಡಿಕೇರಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ಉಸಿರಾಟದ ತೊಂದರೆ ಕಾಣಸಿಕೊಂಡಿತ್ತು.
ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಪರಿಶೀಲಿಸಿದಾಗ ಆಕೆಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾಗಿದ್ದರು. ಬಳಿಕ ಆಕೆಯ ಎರಡು ಮೊಮ್ಮಕ್ಕಳ ಪೋಷಣೆ ಪಾಲನೆಯನ್ನು ಮೂಸಾ ಅವರೇ ನಡೆಸಿಕೊಂಡು ಬರುತ್ತಿದ್ದರೆನ್ನಲಾಗಿದೆ.
ಈ‌ ನಡುವೆ ರಫೀಕ್ ಮಕ್ಕಳನ್ನು ತನಗೆ ನೀಡಬೇಕೆಂದು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಈ ವಾಜ್ಯ ನ್ಯಾಯಾಲಯದಲ್ಲಿರುವಾಗಲೇ ರಫೀಕ್ ನನ್ನ ಮನೆಗೆ ಏಕಾಏಕಿ ಆಕ್ರಮ ಪ್ರವೇಶ ಮಾಡಿ ಪತ್ನಿ ಫಾತೀಮಾ ಹಲ್ಲೆ ನಡೆಸಿ ನಗದು ಹಾಗೂ ಚಿನ್ನವನ್ನು ಅಪಹರಿಸಿದ್ದಲ್ಲದೆ ಎರಡು ಪುಟ್ಟ ಮಕ್ಕಳನ್ನು ಎಳೆದೊಯ್ದಿದ್ದಾನೆ‌ ಎಂದು ಮೂಸಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸುಂಟಿಕೊಪ್ಪ ಪೊಲೀಸರು ರಫೀಕ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!