- ಮೇಘನಾ ಶೆಟ್ಟಿ ಶಿವಮೊಗ್ಗ
ಇಂದು ಮಕ್ಕಳ ದಿನ, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥಕ್ಕೆ ಪ್ರತಿ ವರ್ಷ ಈ ದಿನದಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಪಂಡಿತ್ ನೆಹರೂ ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ, ಜೀವನದುದ್ದಕ್ಕೂ ಮಕ್ಕಳ ಮೇಲಿನ ಪ್ರೀತಿ ಎದ್ದು ಕಾಣುವಂತಿತ್ತು. ಮಕ್ಕಳ ಹಕ್ಕುಗಳಿಗಾಗಿ ಪ್ರತಿಪಾದನೆ ನಡೆಸಿದ್ದು, ಮಕ್ಕಳ ಶಿಕ್ಷಣವನ್ನು ಉತ್ತೇಜಿಸಿದ್ದಾರೆ. ಯುವ ಪ್ರತಿಭೆಗಳನ್ನು ಉತ್ತೇಜಿಸುವ ನೆಹರೂ ಅವರು ಮಕ್ಕಳು ಬಲಿಷ್ಠ ಮತ್ತು ಸಮೃದ್ಧ ಭಾರತದ ನಿರ್ಮಾಣದ ಅಂಶಗಳೆಂದು ನೆಹರೂ ನಂಬಿದ್ದರು.
ನೆಹರೂ ಅವರ ನಿಧನದ ನಂತರ ಅವರ ಜನ್ಮದಿನವನ್ನು ಅವರು ಪ್ರೀತಿಸುವ ಮಕ್ಕಳ ದಿನವನ್ನಾಗಿ ಆಚರಿಸುವುದು ಸರ್ಕಾರದ ನಿರ್ಧಾರವಾಗಿತ್ತು.
ಮಕ್ಕಳ ದಿನಾಚರಣೆ ಅಂಗವಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್‌ಗಳು ವೈರಲ್ ಆಗಿವೆ. ತಮ್ಮ ಮಕ್ಕಳ ಅಥವಾ ತಮ್ಮ ಪ್ರೀತಿಪಾತ್ರರ ಮಕ್ಕಳ ಫೋಟೊಗಳನ್ನು ಸ್ಟೇಟಸ್‌ಗೆ ಹಾಕಿ ಮಕ್ಕಳ ದಿನದ ಶುಭಕೋರಲಾಗುತ್ತಿದೆ.
ಮಕ್ಕಳ ಮೂರ್ತಿ ಚಿಕ್ಕದಾದರೂ ಅವರ ಕೀರ್ತಿ ನಿಜಕ್ಕೂ ದೊಡ್ಡದ್ದು, ಮಕ್ಕಳು ಖಾಲಿ ಪಾತ್ರೆಯಿದ್ದಂತೆ, ಅದಕ್ಕೆ ಸಿಹಿ ಹಾಕಿದರೆ ಸಿಹಿ, ಕಹಿ ಹಾಕಿದರೆ ಕಹಿಯನ್ನು ಹಿಡಿದಿಟ್ಟಿಕೊಳ್ಳುತ್ತಾರೆ. ಸಾಮಾಜಿಕ ಜೀವನದ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದ ಮಕ್ಕಳಿಂದಲೇ ಕಲಿಯೋದಕ್ಕೆ ನೂರಾರು ಪಾಠವಿದೆ.
ಮಕ್ಕಳಿಂದ ಇವುಗಳನ್ನು ಕಲಿತುಕೊಂಡ್ರೆ ನಿಮ್ಮ ಜೀವನವೂ ಸುಲಭ..
- ಕೆಟ್ಟದ್ದನ್ನು ಮರೆತುಬಿಡ್ತಾರೆ, ಯಾರಾದರೂ ಬೈದರೆ, ಜೋರು ಮಾಡಿದರೆ ಅಷ್ಟೇ ಯಾಕೆ ಒಂದು ಏಟು ಕೊಟ್ಟರೂ ಅದನ್ನು ನಿಮಿಷಕ್ಕೆ ಮರೆತು ಜೀವನದಲ್ಲಿ ಮುಂದೆ ಹೋಗ್ತಾರೆ.
- ದ್ವೇಷ ಕಾರೋದಿಲ್ಲ, ಯಾರೇ ಒಂದೇಟು ಕೊಟ್ಟರೂ ರಿವೇಂಜ್ ಅವರಲ್ಲಿಲ್ಲ ಒಂದು ಹನಿ ಕಣ್ಣೀರು ಹಾಕಿ ಸುಮ್ಮನಾಗ್ತಾರೆ, ಮತ್ತದೇ ವ್ಯಕ್ತಿಯ ಬಳಿ ಹೋಗುತ್ತಾರೆ. ಹೊಡೆದದ್ದಕ್ಕೆ ದೊಡ್ಡವರಿಗೇ ಬೇಜಾರುವಂಥ ಸ್ಥಿತಿ ನಿರ್ಮಾಣವಾಗುತ್ತದೆ.
- ಮಕ್ಕಳು ಸದಾ ಕ್ರಿಯೇಟಿವ್, ಇರುವುದರಲ್ಲಿ ಇನ್ನೇನೋ ತಯಾರು ಮಾಡೋದು, ಕ್ರಿಯೇಟಿವ್ ಆಲೋಚನೆಯನ್ನು ಮಾಡ್ತಾರೆ, ನಾವು ಪುಷ್ಠಿ ನೀಡಬೇಕಷ್ಟೆ. ಅವರಿಂದ ಕ್ರಿಯೇಟಿವಿಟಿ ಕಲಿಯಬೇಕು.
- ಮಕ್ಕಳು ಒಂದೇ ಕಡೆ ಕೂರೋದಿಲ್ಲ, ದೈಹಿಕವಾಗಿ ಸದಾ ಆಕ್ಟೀವ್ ಆಗಿರುತ್ತಾರೆ, ಟಿವಿ ಮೊಬೈಲ್ ನೋಡುತ್ತಾ ಗಂಟೆಗಟ್ಟಲೆ ಕೂರೋರು ಇದನ್ನು ಗಮನಿಸಿ.
- ಭಾವನೆಗಳನ್ನು ಜೀವಿಸ್ತಾರೆ, ಯಾವುದನ್ನೂ ತಡೆದುಕೊಳ್ಳುವುದಿಲ್ಲ. ಸಿಟ್ಟು ಬಂದರೆ ಸಿಟ್ಟು, ನೋವಾದರೆ ನೋವು, ಅಳು ಬಂದರೆ ಅಳು, ನಗು ಬಂದರೆ ನಗು. ನಾಟಕ ಅವರಲ್ಲಿಲ್ಲ.
- ಎಲ್ಲಾ ವಿಷಯದ ಮೇಲೂ ಆಸಕ್ತಿ, ಕುತೂಹಲ, ಯಾವ ವಿಷಯಕ್ಕೂ ಸೆಟಲ್ ಆಗೋದಿಲ್ಲ. ಕುತೂಹಲದಿಂದ ನೋಡುತ್ತಲೇ ಇರುತ್ತಾರೆ.
- ಮಕ್ಕಳಿಗೆ ಭಯವೇ ಇಲ್ಲ, ನಾವು ಒಂದು ಕೆಲಸ ಮಾಡುವಾಗ ಎಷ್ಟೆಲ್ಲಾ ಯೋಚನೆ ಮಾಡ್ತೇವೆ, ಹೆದರುತ್ತೇವೆ. ಆದರೆ ಮಕ್ಕಳಿಗೆ ಭಯ ಅನ್ನೋದೇ ಇಲ್ಲ. ಧೈರ್ಯವಾಗಿ ನುಗ್ಗುತ್ತಾರೆ.
- ಸದಾ ಎನರ್ಜಿಯಲ್ಲಿರುತ್ತಾರೆ, ಯಾವಾಗ ಏನು ಬದಲಾವಣೆ ಆಗುತ್ತದೆ ಅನ್ನೋ ಬಗ್ಗೆ ಅವರಿಗೆ ಭಯ ಇಲ್ಲ. ಎನರ್ಜಿಯುತವಾಗಿ ಕೆಲಸಗಳನ್ನು ಮಾಡುತ್ತಾ ಓಡಾಡಿಕೊಂಡು ಇರ‍್ತಾರೆ. ನಾವು ಇದನ್ನು ಅಳವಡಿಸಿಕೊಳ್ಳಬೇಕಲ್ವಾ?
- ಅಪ್ಪ ಅಮ್ಮನ ಪ್ರೀತಿಯೇ ಗಟ್ಟಿ ಅನ್ನೋದನ್ನು ಮಕ್ಕಳು ಹೇಳಿಕೊಡ್ತಾರೆ, ಎಷ್ಟೇ ಜನರಿದ್ರೀ ತನ್ನ ಅಪ್ಪ ಅಮ್ಮನೇ ಸೇಫ್, ಜಗತ್ತಿನಲ್ಲಿ ಎಷ್ಟು ಜನ ಬರಲಿ ಬಿಡಲು ಅಪ್ಪ ಅಮ್ಮನ ಪ್ರೀತಿ ಮರೆಯುವಂತಿಲ್ಲ ಅನ್ನೋದನ್ನು ಕಲಿಸ್ತಾರೆ.
- ಎಲ್ಲರನ್ನೂ ಪ್ರೀತಿಸ್ತಾರೆ, ಕರುಣೆಯಿಂದ ನೋಡ್ತಾರೆ. ಮಕ್ಕಳಿಗೆ ಬಡವ ಶ್ರೀಮಂತ, ಜಾತಿ, ಮತ ಬೇಧ ಇಲ್ಲ. ಎಲ್ಲರನ್ನೂ ಒಂದೇ ರೀತಿ ನೋಡ್ತಾರೆ ಪ್ರೀತಿ ಮಾಡ್ತಾರೆ.
- ಸದಾ ಪ್ರಶ್ನಿಸ್ತಾರೆ, ಪ್ರಶ್ನಿಸದೇ ಹೋದ್ರೆ ಉತ್ತರ ಸಿಗೋದು ಹೇಗೆ? ಈ ಅಭ್ಯಾಸ ಎಂದೆಂದಿಗೂ ಪ್ರಸ್ತುತ.