October 27, 2026
Tuesday, October 27, 2026
spot_img

ಇಂದು ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ? ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಧಾರವಾಡದ ತೀವ್ರ ಸಂಚಲನ ಮೂಡಿಸಿದ್ದ ರಾಜಕೀಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಈಗ ಮತ್ತೆ ಬಂಧನದ ಭೀತಿ ಎದುರಾಗಿದೆ. ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮಹತ್ವದ ಅರ್ಜಿಗಳ ವಿಚಾರಣೆ ಇಂದು (ಅ. 27) ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಬಿಐ

ಹೈಕೋರ್ಟ್ ನೀಡಿದ್ದ ಷರತ್ತುಬದ್ಧ ಜಾಮೀನು ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ಕೊಲೆಯಾದ ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಅವರು ಜಂಟಿಯಾಗಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಚಂದ್ರಶೇಖರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದ್ದು, ಇಂದೇ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಶಾಸಕ ಸ್ಥಾನಕ್ಕೆ ಕುತ್ತು?

ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠವು ವಿನಯ್ ಕುಲಕರ್ಣಿ ವಿರುದ್ಧ ಕೇಳಿಬಂದಿರುವ ಸಾಕ್ಷ್ಯನಾಶ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ಆರೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. “ಇಂತಹ ಗಂಭೀರ ಕೊಲೆ ಆರೋಪ ಹೊತ್ತಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಇರಲು ಅರ್ಹರೇ? ಇಂತವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕು” ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಪ್ರಕರಣದ ಹಿನ್ನೆಲೆ ಏನು?

2016ರ ಜೂನ್‌ನಲ್ಲಿ ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಭೀಕರ ಕೊಲೆ ನಡೆದಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು 2026ರ ಏಪ್ರಿಲ್‌ನಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್, 2026ರ ಜುಲೈನಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ವಿನಯ್ ಕುಲಕರ್ಣಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.

ಇದನ್ನೂ ಓದಿ:

ಈಗ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕುತ್ತಾ ಅಥವಾ ಜಾಮೀನನ್ನು ಕಾಯಂಗೊಳಿಸುತ್ತಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದ್ದು, ಶಾಸಕ ವಿನಯ್ ಕುಲಕರ್ಣಿ ಅವರ ಭವಿಷ್ಯ ಇಂದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

Must Read