ಇಂದು ಮಣ್ಣೆತ್ತಿನ ಅಮವಾಸ್ಯೆ; ರೈತಾಪಿ ವರ್ಗದ ಸಂಭ್ರಮ

-ಶಿವಲಿಂಗಯ್ಯ ಹೊತಗಿಮಠ, ಲಕ್ಷ್ಮೇಶ್ವರ:
ರೈತರಿಗೆ ಎತ್ತುಗಳು ಕಣ್ಣುಗಳಿಂದ್ದಂತೆ.‌ ಮಣ್ಣು ದೈವ ಸ್ವರೂಪಿ. ಜಮೀನಿನಲ್ಲಿ ಎತ್ತುಗಳು ರೈತನಿಗಾಗಿ ಹಗಲಿರುಳು ದುಡಿದರೆ, ಭೂತಾಯಿ ರೈತನಿಗೆ ಅನ್ನ ನೀಡುತ್ತಾಳೆ. ಇದೇ ಕಾರಣಕ್ಕೆ ರೈತರು ಮಣ್ಣು ಹಾಗೂ ಎತ್ತುಗಳನ್ನು ಪೂಜ್ಯ ಭಾವದಿಂದ ಕಾಣುತ್ತಾರೆ.
ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬ ಒಂದೆ ಆದರೂ ದೇಶಾದ್ಯಂತ ಅದನ್ನು ಆಚರಿಸುವ ರೀತಿ ವಿಭಿನ್ನ. ಕಾರ ಹುಣ್ಣಿಮೆ ದಿನ ಎತ್ತುಗಳನ್ನು ಸಿಂಗರಿಸಿ ಪೂಜಿಸುವ ರೈತರು, ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಎತ್ತುಗಳನ್ನು ಮಾಡಿ, ಅವುಗಳಿಗೆ ಪೂಜಿಸುವ ಸಂಪ್ರದಾಯವನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ.
ಹೊಲದಲ್ಲಿ ಸಿಗುವ ಜಿಗುಟು ಮಣ್ಣಿನಿಂದ ಎತ್ತುಗಳನ್ನು ತಯಾರಿಸುವುದು ಇಲ್ಲವೇ ಕುಂಬಾರರು ಮಾಡಿದ ಎತ್ತುಗಳನ್ನು ಖರೀದಿಸಿ ಮಣ್ಣಿನ ಎತ್ತುಗಳನ್ನು ಬಣ್ಣ, ಅಲಂಕಾರಿಕ ವಸ್ತುಗಳಿಂದ ಸಿಂಗರಿಸುತ್ತಾರೆ. ಪೂಜೆಯ ನಂತರ ಹೋಳಿಗೆ, ಕಡಬು ಮುಂತಾದ ಖಾದ್ಯಗಳನ್ನು ದೇವರಿಗೆ ಎಡೆ ಇಟ್ಟು ಪ್ರಾರ್ಥಿಸುತ್ತಾರೆ. ಈ ಆಚರಣೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಭೂತಾಯಿ ಹಾಗೂ ಎತ್ತುಗಳ ಜೊತೆ ಇರುವ ಅವಿನಾಭಾವ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!