August 11, 2026
Tuesday, August 11, 2026
spot_img

ಸ್ಯಾಂಡಲ್‌ವುಡ್ ಹವಾಗೆ ಟಾಲಿವುಡ್ ಫಿದಾ: ‘ಕೆಜಿಎಫ್ 2’ ಬಗ್ಗೆ ಏನಂದ್ರು ಗೊತ್ತಾ ಈ ನಟ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಸಿನಿಮಾಗಳನ್ನು ಅಷ್ಟಾಗಿ ಪರಿಗಣಿಸದ ಪರಭಾಷೆ ಚಿತ್ರರಂಗಗಳು, ಇಂದು ಭಾರತೀಯ ಚಿತ್ರರಂಗವೇ ಹೆಮ್ಮೆಪಡುವಂತೆ ಕನ್ನಡ ಸಿನಿಮಾಗಳತ್ತ ಬೆರಗುಗಣ್ಣಿನಿಂದ ನೋಡುತ್ತಿವೆ. ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ತನ್ನದೇ ಆದ ಛಾಪು ಮೂಡಿಸಿದ್ದು, ಬೇರೆ ಭಾಷೆಯ ಅನೇಕ ಕಲಾವಿದರು ಕನ್ನಡ ಚಿತ್ರಗಳನ್ನು ಮಾದರಿಯಾಗಿ ಸ್ವೀಕರಿಸುತ್ತಿದ್ದಾರೆ. ಈ ಸಾಲಿಗೆ ತೆಲುಗಿನ ಖ್ಯಾತ ನಟ ಸುನಿಲ್ ಸೇರ್ಪಡೆಯಾಗಿದ್ದು, ಕನ್ನಡ ಚಿತ್ರರಂಗದ ಸದ್ಯದ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

‘ಕೆಜಿಎಫ್ 2’ ಹೀರೋಯಿಸಂಗೆ ಫಿದಾ ಆದ ಸುನಿಲ್

ತೆಲುಗು ಚಿತ್ರರಂಗದಲ್ಲಿ ಹಾಸ್ಯನಟ ಹಾಗೂ ಖಳನಟನಾಗಿ ದಶಕಕ್ಕೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿರುವ ಸುನಿಲ್, ‘ಕೆಜಿಎಫ್ 2’ ಚಿತ್ರವನ್ನು ಮುಕ್ತವಾಗಿ ಹೊಗಳಿದ್ದಾರೆ. “ನಾನು ‘ಕೆಜಿಎಫ್’ ಮೊದಲ ಭಾಗವನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ ‘ಕೆಜಿಎಫ್ 2’ ಚಿತ್ರವು ಮೊದಲ ಭಾಗಕ್ಕಿಂತಲೂ ಹಲವು ಪಟ್ಟು ಅದ್ಭುತವಾಗಿ ಮೂಡಿಬಂದಿದೆ. ಆರಂಭದಿಂದ ಅಂತ್ಯದವರೆಗೆ ಸಿನಿಮಾದಲ್ಲಿದ್ದ ಹೀರೋ ಪಾತ್ರ, ಅದ್ಧೂರಿತನ ಹಾಗೂ ಬಿಜಿಎಂ ನಿಜಕ್ಕೂ ಮೈಮನ ಪುಳಕಿತಗೊಳಿಸುತ್ತದೆ. ನಿಜವಾದ ಹೀರೋಯಿಸಂ ಅಂದರೆ ಹೇಗಿರಬೇಕು ಎಂಬುದನ್ನು ಈ ಸಿನಿಮಾ ಜಗತ್ತಿಗೆ ತೋರಿಸಿಕೊಟ್ಟಿದೆ” ಎಂದು ಅವರು ಹರುಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರಗಳ ಮೇಲಿರುವ ಅಪಾರ ಪ್ರೀತಿ

ಕನ್ನಡ ಚಿತ್ರಗಳೊಂದಿಗಿನ ತಮ್ಮ ಅನುಬಂಧವನ್ನು ನೆನಪಿಸಿಕೊಂಡ ಸುನಿಲ್, “ನಾನು ಹಿರಿಯ ನಟ ಕಾಶಿನಾಥ್ ಕಾಲದಿಂದ ಹಿಡಿದು ಉಪೇಂದ್ರ ಅವರ ಸಿನಿಮಾಗಳವರೆಗೂ ಅನೇಕ ಕನ್ನಡ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಕನ್ನಡ ಚಿತ್ರಗಳು, ತೆಲುಗಿಗೆ ಡಬ್ ಆದ ಹಾಗೂ ರೀಮೇಕ್ ಆದ ಸಿನಿಮಾಗಳನ್ನು ತಪ್ಪದೇ ನೋಡುತ್ತೇನೆ” ಎಂದು ಸ್ಯಾಂಡಲ್‌ವುಡ್ ಮೇಲಿರುವ ತಮ್ಮ ಗೌರವವನ್ನು ಹಂಚಿಕೊಂಡಿದ್ದಾರೆ.

‘ಜೋಡೆತ್ತು’ ಸಿನಿಮಾದಲ್ಲಿ ಸುನಿಲ್ ಮಿಂಚು

ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರದ ನಂತರ ಸುನಿಲ್ ಇದೀಗ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಜೋಡೆತ್ತು’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸುಧಾಕರ್ ನಿರ್ದೇಶನ ಹಾಗೂ ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದ ಈ ಚಿತ್ರದ ಬೃಹತ್ ಕ್ಲೈಮ್ಯಾಕ್ಸ್ ಶೂಟಿಂಗ್ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನೂರಾರು ಸಹ-ಕಲಾವಿದರೊಂದಿಗೆ ಪೂರ್ಣಗೊಂಡಿದೆ. ಕನ್ನಡ ಚಿತ್ರರಂಗದ ವೈಭವವನ್ನು ಕೊಂಡಾಡಿರುವ ಸುನಿಲ್ ಅವರ ಈ ಮಾತುಗಳು ಪ್ರಸ್ತುತ ಸ್ಯಾಂಡಲ್‌ವುಡ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !