ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ಕೆಲವೆಡೆ ಭಾನುವಾರ ವರ್ಷದ ಮೊದಲ ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನ ತುಂತುರು ಮಳೆಯಾಗಿದ್ದರೆ, ಬೋಯಿಕೇರಿ ಭಾಗದಲ್ಲಿ ಕೆಲ ಸಮಯ ಧಾರಾಕಾರ ಮಳೆ ಸುರಿದು ಭುವಿಯನ್ನು ತಂಪಾಗಿಸಿದೆ.
ಸುಂಟಿಕೊಪ್ಪ ವ್ಯಾಪ್ತಿಯಲ್ಲೂ ಅಪರಾಹ್ನ 2 ಗಂಟೆ ಸುಮಾರಿಗೆ ಸಾಧಾರಣ ಮಳೆಯಾಗಿದೆ.
ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಮಳೆಯು ಸಣ್ಣ ಪ್ರಮಾಣದಲ್ಲಿ ಸಿಂಚನ ಮಾಡಿರುವುದರಿಂದ ಕೊಂಚ ನಿರಾಳವಾಗುವಂತಾದರೂ, ಇದರಿಂದ ಮತ್ತಷ್ಟು ದಗೆ ಹೆಚ್ಚಾಗುವ ಅತಂಕ ಸೃಷ್ಟಿಸಿದೆ.
ಸುಂಟಿಕೊಪ್ಪ ಸಮೀಪದ ಕಂಬಿಬಾಣೆ, ಭೂತನಕಾಡುವಿನ ಸುತ್ತ ಮುತ್ತಲ ಭಾಗಗಳಲ್ಲೂ ಶನಿವಾರ ಮಳೆಯು ಅಬ್ಬರಿಸಿದ್ದು, ಇದರಿಂದ ಕೃಷಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಸಂಜೆ ವೇಳೆಗೆ ಏಳನೇ ಹೊಸಕೋಟೆ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಗುಡುಗು ಸಹಿತ ಧಾರಾಕಾರ ಮಳೆ ಬಿದ್ದಿದೆ.