ಹೊಸದಿಗಂತ ಡಿಜಿಟಲ್ ಡೆಸ್ಕ್
ʼಭೂಮಿ ಮೇಲಿನ ಸ್ವರ್ಗ ಕಾಶ್ಮೀರʼದಲ್ಲಿ ಮತ್ತೆ ಒಳ್ಳೆಯ ದಿನಗಳು ಮರಳುತ್ತಿವೆ. ಭಯೋತ್ಪಾದಕರ ದಾಳಿ, ಪ್ರತ್ಯೇಕತಾವಾದ, ಕಲ್ಲುತೂರಾಟ, ನಾಗರೀಕರ ಹತ್ಯೆಯಂತಹ ನಕಾರಾತ್ಮಕ ಸಂಗತಿಗಳಿಗೆ ಸುದ್ದಿಯಾಗುತ್ತಿದ್ದ ಕಾಶ್ಮೀರ ಪ್ರವಾಸಿಗರ ಪಾಲಿಗೆ ಸುರಕ್ಷಿತವಲ್ಲದ ತಾಣವಾಗಿ ಪರಿಣಮಿಸಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಅಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಣೆಗೊಂಡಿದೆ. ಕೇಂದ್ರ ಸರ್ಕಾರದ ಪರಿಶ್ರಮದ ಫಲವಾಗಿ ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿ ಸುವ್ಯಸ್ಥೆ ನೆಲೆಸಿದೆ. ಈ ನಡುವೆ ಸಂತಸದಾಯಕ ವಿಚಾರವೊಂದು ಹೊರಬಿದ್ದಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಾಶ್ಮೀರಕ್ಕೆ ಬರೊಬ್ಬರಿ 1.80 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ!.
ಮತ್ತಷ್ಟು ಪ್ರವಾಸಿಗರ ಭೇಟಿ ನಿರೀಕ್ಷೆ!
ಮುಂಬರುವ ಬೇಸಿಗೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ವಾತಾವರಣ ಅತ್ಯಂತ ಆಹ್ಲಾದಕರವಾಗಿರುತ್ತದೆ. ಈ ವೇಳೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಅಲ್ಲದೆ ಜೂನ್‌೩೦ ರಿಂದ ಆರಂಭಗೊಳ್ಳುವ ಅಮರನಾಥ ಯಾತ್ರೆಗೆ ದೇಶದ ಎಲ್ಲಾ ಭಾಗಗಳಿಂದ ಯಾತ್ರಾರ್ಥಿಗಳು ಆಗಮಿಸಲಿದ್ದಾರೆ. ಕಾಶ್ಮೀರ ಪ್ರವಾಸಸೋದ್ಯಮದಲ್ಲಿ ಇದೀಗ ಹೊಸ ಮನ್ವಂತರ ಆರಂಭಗೊಂಡಿದೆ ಎಂದು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಮಾರ್ಚ್ ನಲ್ಲಿ 1,79,970 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕಳೆದ 10 ವರ್ಷಗಳಲ್ಲಿ ಅತಿಹೆಚ್ಚಿನ ಭೇಟಿ ದಾಖಲೆಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಜಿ.ಎನ್.ಇಟೂ ಹೇಳಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಇಲಾಖೆಯಿಂದ ಭುವನೇಶ್ವರ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ರೋಡ್‌ಶೋಗಳನ್ನು ಆಯೋಜಿಸಿದ್ದೇವೆ. ಕಣಿವೆಯ ಎಲ್ಲಾ ಹೋಟೆಲ್‌ಗಳು, ಹೌಸ್‌ಬೋಟಿಂಗ್ ಕೇಂದ್ರಗಳು ಮುಂದಿನ ಎರಡು ತಿಂಗಳವರೆಗೆ ಕಾಯ್ದಿರಿಸಲ್ಪಟ್ಟಿವೆ. ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶುಭ ಸಂಕೇತವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸರ್ಮದ್ ಹಫೀಜ್ ಹೇಳಿದರು. ೨೦೧೯ ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಹಿಂತೆಗೆದುಕೊಂಡ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಕೊರೋನಾ ಸಾಂಕ್ರಾಮಿಕದ ಅಬ್ಬರದ ಕಾರಣದಿಂದ ಪ್ರವಾಸೋದ್ಯಮ ಕ್ಷೇತ್ರ ಕುಸಿದು ಹೋಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ