ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲಿ ಹೊಸ ವರದಿ ಒಂದು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಚೀನಾದ ಕೆಲವು ಎಐ ಕಂಪನಿಗಳು ಸ್ಯಾಟಲೈಟ್ ಚಿತ್ರಗಳು ಮತ್ತು ಓಪನ್ ಡೇಟಾವನ್ನು ಬಳಸಿ ಅಮೆರಿಕ ಸೇನೆಯ ಚಲನವಲನವನ್ನು ವಿಶ್ಲೇಷಿಸಿ, ಆ ಮಾಹಿತಿಯನ್ನು ಇರಾನ್ಗೆ ತಲುಪಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಬೆಳವಣಿಗೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳಲ್ಲಿ ಆತಂಕವನ್ನು ಹೆಚ್ಚಿಸಿದ್ದು, ಯುದ್ಧದ ದಿಕ್ಕು ಬದಲಾಗುವ ಸಾಧ್ಯತೆಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ The Washington Post ವರದಿ ಪ್ರಕಾರ, ಚೀನಾದ ಕೆಲವು ಖಾಸಗಿ ತಂತ್ರಜ್ಞಾನ ಸಂಸ್ಥೆಗಳು ಸ್ಯಾಟಲೈಟ್ ಚಿತ್ರಗಳು, ವಿಮಾನ ಟ್ರ್ಯಾಕಿಂಗ್ ಮಾಹಿತಿ ಹಾಗೂ ಹಡಗುಗಳ ಚಲನೆಯ ಡೇಟಾವನ್ನು ಎಐ ಮೂಲಕ ವಿಶ್ಲೇಷಿಸಿ ಸೇನಾ ಚಟುವಟಿಕೆಗಳ ಬಗ್ಗೆ ಅಂದಾಜು ಮಾಡುತ್ತಿವೆ. ಈ ಮಾಹಿತಿಯು ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಮುಂದಿನ ಸೇನಾ ನಡೆ ಬಗ್ಗೆ ಸುಳಿವು ನೀಡುತ್ತದೆ ಎನ್ನಲಾಗಿದೆ.
ವರದಿಯಲ್ಲಿ ‘ಮಿಜಾರ್ವಿಷನ್ ಮತ್ತು ಜೀನ್ಗನ್ ಟೆಕ್ನಾಲಜಿ ಮುಂತಾದ ಕಂಪನಿಗಳ ಹೆಸರುಗಳು ಪ್ರಸ್ತಾಪವಾಗಿವೆ. ಇವು ಯುದ್ಧವಿಮಾನ ವಾಹಕ ನೌಕೆಗಳ ಮರುಪೂರಣ, ಕ್ಷಿಪಣಿ ವ್ಯವಸ್ಥೆಗಳ ಸ್ಥಳ ಬದಲಾವಣೆ ಮತ್ತು ಸೇನಾ ನೆಲೆಗಳ ಚಲನವಲನವನ್ನು ಗುರುತಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
ಇದು ಯಾವುದೇ ರಹಸ್ಯ ವೆಬ್ಸೈಟ್ ಹ್ಯಾಕ್ ಮೂಲಕ ಸಿಗುವ ಮಾಹಿತಿ ಅಲ್ಲ. ಸಾರ್ವಜನಿಕವಾಗಿ ಲಭ್ಯವಿರುವ ಸ್ಯಾಟಲೈಟ್ ಚಿತ್ರಗಳು, ವಿಮಾನಗಳ ಹಾರಾಟದ ಡೇಟಾ ಹಾಗೂ ಹಡಗುಗಳ ಟ್ರ್ಯಾಕಿಂಗ್ ಮಾಹಿತಿಯನ್ನು ಎಐ ಟೂಲ್ಗೆ ಅಪ್ಲೋಡ್ ಮಾಡಿ, ಅದರಿಂದ ಮುಂದಿನ ಚಲನೆಗಳನ್ನು ಅಂದಾಜಿಸಲಾಗುತ್ತಿದೆ ಎಂಬುದು ವರದಿಯ ಮುಖ್ಯ ಅಂಶವಾಗಿದೆ.
ಈ ಬೆಳವಣಿಗೆ ಜಾಗತಿಕ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಅಮೆರಿಕ ಭದ್ರತಾ ವಲಯದಲ್ಲಿ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.



