ಹೊಸದಿಗಂತ ವರದಿ ಸಕಲೇಶಪುರ:
ಕೃಷಿ ಕೆಲಸಕ್ಕೆ ತೆರಳಿದ್ದ ಯುವ ರೈತನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದಲ್ಲಿ ಬೆಳಗ್ಗೆ ನಡೆದಿದೆ.
ಮೃತ ರೈತನನ್ನು ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವಳ್ಳಿ ಗ್ರಾಮದ ನಿವಾಸಿ ಅಭಿಷೇಕ್ (36) ಎಂದು ಗುರುತಿಸಲಾಗಿದೆ.
ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಅಭಿಷೇಕ್ ಬಳಸುತ್ತಿದ್ದ ಅಲ್ಯೂಮಿನಿಯಂ ಏಣಿ ಮೇಲ್ಭಾಗದಲ್ಲಿ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್ ಲೈನ್‌ಗೆ ತಗುಲಿದೆ ಎನ್ನಲಾಗಿದೆ. ಏಣಿಯ ಮೂಲಕ ವಿದ್ಯುತ್ ಪ್ರವಹಿಸಿ ತೀವ್ರ ವಿದ್ಯುತ್ ಆಘಾತಕ್ಕೊಳಗಾದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಭಿಷೇಕ್ ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆಯ ನಿಧನದ ಬಳಿಕ ಕುಟುಂಬ ಹಾಗೂ ಕೃಷಿಯ ಜವಾಬ್ದಾರಿಯನ್ನು ಅಭಿಷೇಕ್ ಅವರೇ ವಹಿಸಿಕೊಂಡಿದ್ದರು. ಕೃಷಿಯನ್ನೇ ನೆಚ್ಚಿಕೊಂಡು ಶ್ರಮಿಸುತ್ತಿದ್ದ ಯುವ ರೈತನ ಆಕಸ್ಮಿಕ ಸಾವು ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದೆ.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



