May 20, 2026
Wednesday, May 20, 2026
spot_img

ತುಮಕೂರಿನಲ್ಲಿ ಘೋರ ದುರಂತ: ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು

ಹೊಸದಿಗಂತ ವರದಿ, ತುಮಕೂರು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದ್ದು, ಅಂಗಡಿ ಮುಂಭಾಗದಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರು ಹರಿದು ಸಾವನ್ನಪ್ಪಿರುವ ಹೃದಯ ವಿದ್ರಾಹಕ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ನಿಟ್ಟೂರಿನ ರಾಘವೇಂದ್ರ ಟೆಕ್ಸ್‌ಟೈಲ್ ಜವಳಿ ಅಂಗಡಿ ಮಾಲೀಕರಾದ ಮೊಹನ್ ಕುಮಾರ್ ಅವರ ಪುತ್ರ ಶೋಭಿತ್ ರಾಘವ್ (13) ಮೃತ ಬಾಲಕ.

ಶಾಲೆಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತಂದೆ-ತಾಯಿ ಮಗನನ್ನು ಅಂಗಡಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಏಕಾಏಕಿ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರು ನಿಯಂತ್ರಣ ತಪ್ಪಿ ಬಾಲಕನ ಮೇಲೆ ಹರಿದಿದೆ.

ಈ ವೇಳೆ ತಕ್ಷಣ ಸ್ಥಳೀಯರು ಆತಂಕಗೊಂಡು ಮಗುವನ್ನು ರಕ್ಷಿಸಲು ಧಾವಿಸಿದ್ದು, ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ಬಾಲಕ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ .

ಮಗುವಿನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರ ದುಃಖ ಗ್ರಾಮಸ್ಥರ ಕಣ್ಣೀರು ತರಿಸಿದೆ. ಸ್ಥಳೀಯರು ರಸ್ತೆ ಸುರಕ್ಷತೆ ಮತ್ತು ವೇಗ ನಿಯಂತ್ರಣದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರಿನ ವೇಗ, ಚಾಲಕನ ನಿರ್ಲಕ್ಷ್ಯ ಸೇರಿದಂತೆ ಎಲ್ಲಾ ಅಂಶಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !