June 22, 2026
Monday, June 22, 2026
spot_img

ಮದುವೆಗೆ ಒಂದೇ ದಿನ ಮುಂಚೆ ದಾರುಣ ಅಂತ್ಯ: ‘ಪಾಗಲ್ ಪ್ರೇಮಿ’ ಕಿರುಕುಳಕ್ಕೆ ನೊಂದು ತಂದೆ, ತಾಯಿ, ಮಗಳು ಆತ್ಮ*ಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮದುವೆಯಾಗಬೇಕಿದ್ದ ವಧು ಸೇರಿದಂತೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ತಂದೆ ಶಿವಣ್ಣ, ತಾಯಿ ನಾಗರತ್ನ ಹಾಗೂ ಮಗಳು ರಕ್ಷಿತಾ ಎಂದು ಗುರುತಿಸಲಾಗಿದೆ. ಮದುವೆಗೆ ಇನ್ನು ಒಂದೇ ದಿನ ಬಾಕಿ ಇರುವಾಗ ನಡೆದ ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಘಟನೆಯ ಹಿನ್ನೆಲೆ:

ಮೃತ ಯುವತಿ ರಕ್ಷಿತಾಳಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕ ರಕ್ಷಿತಾಳಿಗೆ ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಪೀಡಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ರಕ್ಷಿತಾಳ ಮದುವೆ ನಿಶ್ಚಯವಾಗಿದ್ದರೂ ಆತನ ಕಾಟ ನಿಂತಿರಲಿಲ್ಲ.

ಗಂಡಿನ ಮನೆಯವರಿಗೆ ಮೆಸೇಜ್ ಕಳುಹಿಸಿ ವಿಕೃತಿ:

ಉಲ್ಲಾಸ್ ಗೌಡ ರಕ್ಷಿತಾಳ ಮೊಬೈಲ್ ಮೆಸೇಜ್‌ಗಳು ಹಾಗೂ ಹಳೆಯ ಕೆಲವು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಮದುವೆ ನಿಶ್ಚಿತಾರ್ಥ ಮುಗಿದ ನಂತರ, ಆತ ಆ ಎಲ್ಲಾ ಫೋಟೋ ಮತ್ತು ಮೆಸೇಜ್‌ಗಳನ್ನು ರಕ್ಷಿತಾ ಮದುವೆಯಾಗಬೇಕಿದ್ದ ವರನಿಗೆ ಹಾಗೂ ಆತನ ಕುಟುಂಬದವರಿಗೆ ಕಳುಹಿಸಿ ಮದುವೆ ಮುರಿಯಲು ಯತ್ನಿಸಿದ್ದಾನೆ.

ಅವಮಾನ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು ಸಾವು:

ಮದುವೆಗೆ ಮುನ್ನವೇ ಈ ರೀತಿಯ ಬೆಳವಣಿಗೆಯಿಂದ ಇಡೀ ಕುಟುಂಬ ಸಮಾಜದಲ್ಲಿ ತೀವ್ರ ಅವಮಾನ ಎದುರಿಸುವಂತಾಯಿತು. ಮಾನಸಿಕ ಹಿಂಸೆ ಹಾಗೂ ಈ ನೋವನ್ನು ತಡೆಯಲು ಸಾಧ್ಯವಾಗದೆ, ಇಡೀ ಕುಟುಂಬವೇ ಮನೆಯಲ್ಲೇ ವಿಷ ಸೇವಿಸಿ ಸಾವಿಗೆ ಶರಣಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬಸ್ಥರು ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಸಾವಿಗೆ ಉಲ್ಲಾಸ್ ಗೌಡನೇ ನೇರ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:

ಪೊಲೀಸರ ಭೇಟಿ ಮತ್ತು ತನಿಖೆ:

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಡೆತ್‌ನೋಟ್ ಹಾಗೂ ಮೊಬೈಲ್ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಉಲ್ಲಾಸ್ ಗೌಡನಿಗಾಗಿ ಹುಡುಕಾಟ ತೀವ್ರಗೊಂಡಿದೆ. ಮದುವೆ ಮಂಟಪ ಏರಬೇಕಿದ್ದ ವಧು ಹೆಣವಾಗಿರುವುದನ್ನು ಕಂಡು ಗ್ರಾಮಸ್ಥರ ಕಣ್ಣಾಲಿಗಳು ಒದ್ದೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !