ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು, 27 ಉಗ್ರರನ್ನು ಹತ್ಯೆಗೈದು, 150 ಪ್ರಯಾಣಿಕರನ್ನು ರಕ್ಷಿಸಿವೆ. ಇನ್ನೂ 300 ಮಂದಿಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ .
ಶಸ್ತ್ರಸಜ್ಜಿತ ದಾಳಿಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು 155 ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಯಾಚರಣೆ ವೇಳೆ 27 ಬಂಡುಕೋರರನ್ನು ಹೊಡೆದುರುಳಿಸಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ರಕ್ಷಿಸಲಾದ ಪ್ರಯಾಣಿಕರನ್ನು ಹತ್ತಿರದ ಪಟ್ಟಣವಾದ ಮಾಚ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.
ಪ್ರತ್ಯೇಕತಾವಾದಿ ದಂಗೆಕೋರ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಂಗಳವಾರ ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದಾಗ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಎಷ್ಟು ಒತ್ತೆಯಾಳುಗಳು ಉಳಿದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿಎಲ್‌ಎ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ಹೇಳಿದೆ. ಉಗ್ರರು 30 ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.