ಹೊಸದಿಗಂತ ವರದಿ,ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಗನ ಮೂಲಕ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಸಿಎಂ ಶ್ಯಾಡೋ ಎಂಬ ಮಾತು ಈ ಹಿಂದೆ ಕೇಳಿದ್ದೆವು. ಅದು ಈಗ ’ಹಲೋ ಅಪ್ಪಾ’ ವೀಡಿಯೋದಿಂದ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಸಿಎಂ ಸೀಟಿನ ಬ್ಯಾಕ್ ಡ್ರೈವರ್ ಆಗಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಗ ಅಧಿಕಾರಿಗಳ ವರ್ಗಾವಣೆ ಮಾಡಿಸುವುದು ಸರಿಯಲ್ಲ. ಸಿದ್ದರಾಮಯ್ಯ ಮಗನ ಮೂಲಕ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಸ್ಥಿತಿ ಈಗ ಎಲ್ಲಿಗೆ ತಲುಪಿದೆ ಎಂಬುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಆನರ ಮುಂದೆ ಮಗನ ಫೋನ್ ನಡೆಸಿದ ಸಂಭಾಷಣೆ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆಗಳಿಗೆ ಸಂಬಂಧಿಸಿದ್ದು ಎಂದು ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಸುಳ್ಳು ಎನ್ನುವುದು ನಿನ್ನೆಯ ಪೊಲೀಸ್ ವರ್ಗಾವಣೆ ಪಟ್ಟಿಯಿಂದ ಬಯಲಾಗಿದೆ. ಎಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆಮ ಎಂದರು.
ಸಚಿವ ಜಮೀರ್ ಅಹಮದ್ ದುರಹಂಕಾರದ ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಜಮೀರ್ ಮನಸ್ಥಿತಿ ಎಂತಹದ್ದೆಂದು ತೋರಿಸುತ್ತದೆ. ಎಲ್ಲ ಸಮುದಾಯಗಳನ್ನು ಮೀರಿ ಸಂವಿಧಾನ ರಚನೆಯಾಗಿ ಸಭಾಪತಿಗೆ ಗೌರವದ ಸ್ಥಾನ ಕಲ್ಪಿಸಿದೆ. ಇದು ರಾಜ್ಯ ಮತ್ತು ಸಂವಿಧಾನಕ್ಕೆ ಮಾಡಿದ ಅಪಮಾನ. ಇದಕ್ಕೆ ಜಮೀರ್ ಎರಡೂ ಸದನಗಳಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.