ಗಾಳಕ್ಕೆ ಸಿಲುಕಿದ ನಾಗರ: ಎರಡು ತಿಂಗಳ ಯಶಸ್ವಿ ಚಿಕಿತ್ಸೆ ಬಳಿಕ ಮರಳಿ ಕಾಡಿಗೆ!

ಹೊಸದಿಗಂತ ವರದಿ,ಕುಶಾಲನಗರ:

ಕಪ್ಪೆ‌ ನುಂಗಲು ಬಂದು ಗಾಳಕ್ಕೆ ಸಿಲುಕಿ ನರಳಾಡಿದ್ದ ನಾಗರ ಎರಡು ತಿಂಗಳ ಚಿಕಿತ್ಸೆಯ ಬಳಿಕ ಇದೀಗ ಸಂಪೂರ್ಣ ಗುಣಮುಖವಾಗಿ ಮರಳು ಕಾಡು ಸೇರಿದೆ.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿ ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ಮೆಹಬೂಬ್ ಸಾಬ್ ಎಂಬವರು ಸೆ.30ರಂದು ಮೀನು ಹಿಡಿಯಲೆಂದು ಗಾಳಕ್ಕೆ‌ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು.‌ ಆದರೆ ಮೀನು ಸಿಗದ ಕಾರಣ ಕಪ್ಪೆ ಸಹಿತ ಗಾಳವನ್ನು ತಂದು ಮನೆಯಂಗಳದಲ್ಲಿ ಇರಿಸಿದ್ದರು. ಇದೇ ಪ್ರದೇಶದಲ್ಲಿ ಕೆಲ ದಿನಗಳಿಂದ ಅಡ್ಡಾಡುತ್ತಿದ್ದ ನಾಗರ ಹಾವೊಂದು ಅಪಾಯ ಅರಿಯದೆ ಈ ಕಪ್ಪೆಯನ್ನು ನುಂಗಿದ ಗಂಟಲಿಗೆ ಗಾಳ ಸಿಲುಕಿಕೊಂಡಿದೆ.

ನಾಗರಹಾವು ಒದ್ದಾಡುತ್ತಿರುವುದನ್ನು ಗಮನಿಸಿದ‌ ಮನೆ‌ ಮಾಲಕ, ಸ್ನೇಕ್ ಗಫೂರ್ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ನೇಕ್ ಗಫೂರ್ ಕೂಡಾ ಹಾವಿನ‌ ಬಾಯಿಯಿಂದ ಗಾಳ ತೆಗೆಯಲು ಶ್ರಮಿಸಿ ಸಾಧ್ಯವಾಗಲಿಲ್ಲ. ಸ್ನೇಕ್ ವಾವ ಸೇರಿದಂತೆ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಲಾಗಿ ಹಾವಿಗೆ ಚಿಕಿತ್ಸೆ‌ ನೀಡಲು ಕೊಡಗಿನಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಬಳಿಕ‌ ಮೈಸೂರಿನ ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ಬಳಿಕ‌ ಮೈಸೂರಿನಲ್ಲಿ ಚಿಕಿತ್ಸೆಗೆ ಅವಕಾಶವಿರುವುದು ತಿಳಿದು ಬಂದಿತ್ತು. ಹೀಗಾಗಿ 4 ವರ್ಷ ಪ್ರಾಯದ 5 ಅಡಿ ಉದ್ದದ ಈ ನಾಗರಹಾವನ್ನು ಐರಾವತ ಬಸ್’ನಲ್ಲಿ‌ ಮೈಸೂರಿಗೆ ಸ್ನೇಕ್ ಗಫೂರ್ ಕಳುಹಿಸಿಕೊಟ್ಟಿದ್ದರು.

ಅಲ್ಲಿ ಸೂರ್ಯಕೀರ್ತಿ ಅವರ ನೇತೃತ್ವದಲ್ಲಿ ಡಾ.ಅಭಿಲಾಷ್ ಅವರು ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ. ಎಕ್ಸರೇ ಮೂಲಕ ಗಾಳ ಹೊಟ್ಟೆಯಲ್ಲಿರುವ ಬಗ್ಗೆ ಖಚಿತಪಡಿಸಿಕೊಂಡು‌ ವೈದ್ಯಕೀಯ ಶಾಸ್ತ್ರದ ಪ್ರಕಾರ ಹಾವಿನ ಗುದದಿಂದ ಗಾಳವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಳದೊಂದಿಗೆ ನುಂಗಿದ್ದ ಕಪ್ಪೆ ಹೊಟ್ಟೆಯಲ್ಲಿ ಜೀರ್ಣವಾಗಿದ್ದು, ಗಾಳ ಮಾತ್ರ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು.

ಇದೊಂದು ಅಪರೂಪದ ಘಟನೆ ಎಂದು ತಿಳಿಸಿರುವ ಸೂರ್ಯಕೀರ್ತಿ ಅವರು ಶನಿವಾರ ಹಾವನ್ನು‌ ಕೂಡುಮಂಗಳೂರು ಗ್ರಾಮದ ಗಪೂರ್ ಮನೆ ಹತ್ತಿರ ತಂದು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಯಡವನಾಡು ಮೀಸಲು ಅರಣ್ಯಕ್ಕೆ‌ ಬಿಟ್ಟಿದ್ದಾರೆ.
ಈ ಸಂದರ್ಭ ಉರಗ ರಕ್ಷಕರಾದ ಕೂಡಿಗೆಯ ಸ್ನೇಕ್ ಗಫೂರ್, ಸೋಮವಾರಪೇಟೆಯ ಸ್ನೇಕ್ ರಘು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!