January17, 2026
Saturday, January 17, 2026
spot_img

ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಪತ್ತೆ: ಮನೆ ಅಡಿಪಾಯ ಅಗೆಯುವಾಗ ಪತ್ತೆಯಾಯ್ತು ಸ್ವರ್ಣಾಭರಣ!

ಹೊಸದಿಗಂತ ಗದಗ:

ಕಲೆ ಮತ್ತು ವಾಸ್ತುಶಿಲ್ಪದ ನೆಲೆವೀಡು, ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಪುರಾತನ ಕಾಲದ ನಿಧಿ ಪತ್ತೆಯಾಗಿದ್ದು, ಇಡೀ ಜಿಲ್ಲೆಯ ಗಮನ ಸೆಳೆದಿದೆ. ಗ್ರಾಮದ 4ನೇ ವಾರ್ಡ್ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಹಳೆಯ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕುತ್ತಿದ್ದ ವೇಳೆ ಈ ಆಕಸ್ಮಿಕ ‘ಸಂಪತ್ತು’ ಬಯಲಿಗೆ ಬಂದಿದೆ.

ಮನೆ ನಿರ್ಮಾಣಕ್ಕಾಗಿ ಕಾರ್ಮಿಕರು ಗುಂಡಿ ಅಗೆಯುತ್ತಿದ್ದಾಗ ಮಣ್ಣಿನ ಅಡಿಯಲ್ಲಿ ಅಡಗಿದ್ದ ಹೊಳೆಯುವ ಚಿನ್ನಾಭರಣಗಳು ಕಂಡುಬಂದಿವೆ. ಸುಮಾರು ಅರ್ಧ ಕೆಜಿಗೂ ಅಧಿಕ ತೂಕದ ಪುರಾತನ ಶೈಲಿಯ ಆಭರಣಗಳು ಹಾಗೂ ಚಿನ್ನದ ನಾಣ್ಯಗಳು ಇದರಲ್ಲಿವೆ ಎಂದು ಅಂದಾಜಿಸಲಾಗಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ನಿಧಿಯನ್ನು ಕಣ್ಣಾರೆ ನೋಡಲು ಗ್ರಾಮದ ಹಾಗೂ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಗಂಗವ್ವನ ಮನೆಯತ್ತ ಧಾವಿಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ದೊರೆತ ಎಲ್ಲಾ ಬಂಗಾರದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೆಚ್ಚಿನ ಸಂಶೋಧನೆಗಾಗಿ ಕಳುಹಿಸಿಕೊಟ್ಟಿದ್ದಾರೆ.

“ದೊರೆತಿರುವ ಆಭರಣಗಳು ಮತ್ತು ನಾಣ್ಯಗಳು ಅತ್ಯಂತ ಪುರಾತನ ಕಾಲದ್ದಾಗಿವೆ. ಇವು ಯಾವ ರಾಜವಂಶಕ್ಕೆ ಸೇರಿದವು ಮತ್ತು ಯಾವ ಕಾಲಘಟ್ಟದವು ಎಂಬುದು ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ತಿಳಿದುಬರಲಿದೆ,” ಎಂದು ಲಕ್ಕುಂಡಿ ಪ್ರಾಧಿಕಾರದ ಸದಸ್ಯರಾದ ಸಿದ್ದು ಪಾಟೀಲ ಮಾಹಿತಿ ನೀಡಿದ್ದಾರೆ.

Must Read

error: Content is protected !!