ಹೊಸದಿಗಂತ ವರದಿ, ಯಲ್ಲಾಪುರ:
ಗಿರಿಜನರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲು ಸಮಾಜದ ಜತೆ ಇರುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಬುಧವಾರ ಗಿರಿಜನ ಸುರಕ್ಷಾ ವೇದಿಕೆ ಹಮ್ಮಿಕೊಂಡಿದ್ದ ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಇದ್ದ ತಾಂತ್ರಿಕ ತೊಂದರೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಇದನ್ನು ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದರು.
ವನವಾಸಿ ಕಲ್ಯಾಣದ ಪ್ರಮುಖ ಶ್ರೀಪಾದಜೀ ದಿಕ್ಸೂಚಿ ಭಾಷಣ ಮಾಡಿ, ವನವಾಸಿಗಳ ಅತಿಕ್ರಮಣ ಪ್ರದೇಶವನ್ನು ಅಧಿಕಾರಿಗಳು ಒಕ್ಕಲೆಬ್ಬಿಸುತ್ತಾರೆ. ಆದರೆ ಅವರೇ ಟೂರಿಸಂ ಹೆಸರಲ್ಲಿ ರೆಸಾರ್ಟ್ ಗಳನ್ನು ಕಟ್ಟಲು ಅವಕಾಶ ಕೊಡುತ್ತಾರೆ. ಸರ್ಕಾರದ ಈ ದ್ವಂದ್ವ ನೀತಿ ಬದಲಾದರೆ ಮಾತ್ರ ಅರಣ್ಯ ಹಕ್ಕು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, ವನವಾಸಿಗಳಿಗೆ ನ್ಯಾಯ ದೊರಕಲು ಸಾಧ್ಯ ಎಂದರು. ಗಿರಿಜನರಲ್ಲಿ ಸಾಮಾನ್ಯ ಜನರು, ಸ್ವಾತಂತ್ರ್ಯ ಹೋರಾಟಗಾರರು, ಆಡಳಿತದ ಚುಕ್ಕಾಣಿ ಹಿಡಿದವರೂ ಇದ್ದಾರೆ. ಆದರೂ ಅವರು ನಿರೀಕ್ಷಿತ ಮಟ್ಟದ ಪ್ರಗತಿ ಹೊಂದಿಲ್ಲ. ಗಿರಿಜನರಿಗೆ ಆದ ಅನ್ಯಾಯ ಸರಿಪಡಿಸುವ ಕಾರ್ಯವನ್ನು ವೇದಿಕೆ ಮಾಡುತ್ತಿದೆ. ಜನಗಣತಿಯಲ್ಲಿ ವನವಾಸಿಗಳನ್ನು ಹಿಂದು ಎಂದು ಪರಿಗಣಿಸಬೇಕು. ಮತಾಂತರಗೊಂಡ ಎಸ್.ಸಿ, ಎಸ್.ಟಿಯವರು ಎಸ್.ಸಿ, ಎಸ್.ಟಿ ಅಥವಾ ಅಲ್ಪಸಂಖ್ಯಾತ ಯಾವುದಾದರೂ ಒಂದೇ ಸೌಲಭ್ಯ ಪಡೆಯುವಂತಾಗಬೇಕು. ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕು ವನವಾಸಿಗಳಿಗೆ ದೊರಕುವಂತಾಗಬೇಕು ಎಂದರು. ಎಲ್ಲರೂ ಒಗ್ಗಟ್ಟಾಗಿ ಇಂತಹ ಸಮಾವೇಶಗಳ ಮೂಲಕ ಗಿರಿಜನರ ಸಮಸ್ಯೆಗಳ ಬಗೆಗೆ ಚರ್ಚಿಸಿ, ಒಕ್ಕೊರಲ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಗಿರಿಜನ ಸುರಕ್ಷಾ ವೇದಿಕೆ ಜಿಲ್ಲಾಧ್ಯಕ್ಷ ನಾರಾಯಣ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಗಿರಿಜನ ಸಮಾಜದ ಸಾಧಕರಾದ ಕೋಂಡು ಪಾಟೀಲ, ಪಾಂಡುರಂಗ ಮರಾಠಿ ಅವರನ್ನು ಗೌರವಿಸಲಾಯಿತು. ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಹಿತ್ಲಳ್ಳಿ ಗ್ರಾ.ಪಂ ಸದಸ್ಯೆ ಸುಶೀಲಾ ಸಿದ್ದಿ, ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ, ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪ್ರಮುಖರಾದ ಬಸವರಾಜ ಓಶಿಮಠ, ಜಯರಾಮ ಸಿದ್ದಿ, ದೋಂಡು ಪಾಟೀಲ, ಸಿದ್ದು ಜೋರೆ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ರಾಮು ನಾಯ್ಕ, ಪ್ರಸಾದ ಹೆಗಡೆ ನಿರ್ವಹಿಸಿದರು. ಘಟ್ಟದ ಮೇಲಿನ ತಾಲೂಕುಗಳ ಗಿರಿಜನರು ಭಾಗವಹಿಸಿದ್ದರು.