ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆ ಆಯ್ಕೆ: ಬಿಜೆಪಿ ಎಸ್.ಟಿ.ಮೋರ್ಚಾ ಹರ್ಷ

ಹೊಸದಿಗಂತ ವರದಿ ಮಡಿಕೇರಿ:

ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಕೊಡಗು ಜಿಲ್ಲಾ‌ ಬಿಜೆಪಿ ಎಸ್.ಟಿ.ಮೋರ್ಚಾ ಅಭಿಪ್ರಾಯಪಟ್ಟಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಜಿಲ್ಲಾಧ್ಯಕ್ಷ ಮಿಟ್ಟು ರಂಜಿತ್‌ ಅವರು, ಒಡಿಸ್ಸಾ ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಎನ್‌ಡಿಎ ಸರಕಾರ, ಈ ದೇಶದಲ್ಲಿ ತುಳಿತಕ್ಕೊಳಗಾಗಿರುವ ಬುಡಕಟ್ಟು ಸಮುದಾಯದವರು ಕೂಡಾ ಇತರರಂತೆಯೇ ಉನ್ನತ ಹುದ್ದೆಗಳಿಗೆ ಏರಬಹುದು ಎಂಬುದನ್ನು ತೋರಿಸಿದೆ. ಅಲ್ಲದೆ ಬುಡಕಟ್ಟು ಸಮುದಾಯದವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ, ಮೋದಿ ಅವರು ಪ್ರಧಾನ ಮಂತ್ರಿಯಾದ ಬಳಿಕ ಪರಿಶಿಷ್ಟ ಜಾತಿಗೆ ಸೇರಿದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿಸಿದರು, ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರಿದ ಮರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದರಿಂದ ಕಡು ಬಡವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಕೂಡಾ ಈ ದೇಶದ ಸಂವಿಧಾನದಡಿ ಉನ್ನತ ಸ್ಥಾನಗಳಿಗೆ ಏರಲು ಅರ್ಹರು ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ. ಇದು ಬುಡಕಟ್ಟು ಜನರಲ್ಲಿ ಹೊಸ ಚೈತನ್ಯವನ್ನು ತಂದು ಕೊಟ್ಟಿದೆ ಎಂದು ಮಿಟ್ಟು ರಂಜಿತ್ ವಿಶ್ಲೇಷಿಸಿದರು.

ಇದುವರೆಗೂ ತುಳಿತಕ್ಕೆ ಒಳಗಾಗಿದ್ದ ಪರಿಶಿಷ್ಟ ಪಂಗಡದ ಜನತೆ ಸರಕಾರದ ಕಡ್ಡಾಯ ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಈ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಮಿಟ್ಟು ಹೆಮ್ಮೆ ವ್ಯಕ್ತಪಡಿಸಿದರಲ್ಲದೆ, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದ ಪ್ರಧಾನಿ ಮೋದಿ,‌ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದಿಯಾಗಿ ಪ್ರತಿಯೊಬ್ಬರಿಗೂ ಕೊಡಗು ಜಿಲ್ಲಾ ಬಿಜೆಪಿ ಎಸ್.ಟಿ.ಮೋರ್ಚಾ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!