ಹೊಸದಿಗಂತ ವರದಿ, ಹುಬ್ಬಳ್ಳಿ:
ಹಿಂದು ಧರ್ಮ ಕೀಳಾಗಿ ನೋಡುವುದು, ನಂಬಿಕೆ ಹಾಳು ಮಾಡುವ ಕೆಲಸ ಆಂಧ್ರ ಪ್ರದೇಶದ ಜಗನ್‌ಮೋಹನ್ ರೆಡ್ಡಿ ಹಾಗೂ ಕಾಂಗ್ರೆಸ್ ಸರ್ಕಾರ ಈ ಮೂಲಕ ಮಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ತಿರುಪತಿ ಲಾಡು ತಯಾರಿಸುವಲ್ಲಿ ಬೇರೆ ತುಪ್ಪ ಬಳಸಿರುವ ಬಗ್ಗೆ ಮಾತನಾಡಿದ ಅವರು, ವೈಜ್ಞಾನಿಕವಾಗಿ ಸಂಶೋಧನೆ ಮಾಡಿದ ವರದಿಯನ್ನು ಸದ್ಯದ ಸಿಎಂ ಚಂದ್ರಬಾಬು ನಾಯ್ಡು ಬಹಿರಂಗ ಪಡಿಸಿದ್ದಾರೆ. ಇದೊಂದು ವಿಚಾರದಿಂದ ಜಗನ್ ಮೋಹನ ರೆಡ್ಡಿ ಏನುಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ ಎಂದರು.
ತಿರಪತಿ ತಿಮ್ಮಪ್ಪನಿಗೆ ನಡೆದುಕೊಳ್ಳುವ ಭಕ್ತರಿಗೆ ಧಕ್ಕೆ ತರುವ, ಮನಸ್ಥಿತಿ ಹಾಳು ಮಾಡುವ ಹಾಗೂ ಹಿಂದು ನಂಬಿಕೆ ಹಾಳು ಮಾಡುವ ಕುತಂತ್ರವಾಗಿದೆ. ಜಗನ್ ಮೋಹನ್ ರೆಡ್ಡಿ ಮತಾಂತರವಾದ ಕ್ರಿಶ್ಚಿಯನ್ ಆಗಿದ್ದಾರೆ.ಹಿಂದು ಸಂಸ್ಕೃತಿ ಹಾಗೂ ಧರ್ಮದ ಬಗ್ಗೆ ನಂಬಿಕೆ ಇಲ್ಲದ ವ್ಯಕ್ತಿ ಎಂದು ಆರೋಪಿಸಿದರು.
ಇಂತಹವರಿಗೆ ಕಾಂಗ್ರೆಸ್ ಯಾವಾಗಲೂ ಸಹಕಾರ ನೀಡುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಪಸಂಖ್ಯಾತರಿಗೆ ಏನಾದರೂ ಆದರೆ ತಕ್ಷಣ ಪ್ರತಿಕ್ರಿಯಿಸುವ ರಾಹುಲ್ ಗಾಂಧಿ ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಹಾಗೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿರುವುದು ಗೊತ್ತಾಗಿದ್ದು, ಅವರು ರಾಜೀನಾಮೆ ನೀಡುವ ಹಂತಕ್ಕೆ ಬಂದಿದೆ. ಕಾಂಗ್ರೆಸ್‌ನಲ್ಲಿ ಒಳಜಗಳ ಜೋರಾಗಿದೆ. ಸಿಎಂ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಸರ್ಕಾರ ಈ ಎಲ್ಲ ವಿಚಾರಗಳ ವಿಷಯಾಂತರ ಮಾಡಲು ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಸಚಿವ ಕುಮಾರಸ್ವಾಮಿ ಹಾಗೂ ಯರಿಯೂರಪ್ಪ ಅವರ ಮೇಲೆ ೧೦ ವರ್ಷದ ಹಿಂದಿನ ಪ್ರಕರಣಗಳ ಬಗ್ಗೆ ಈಗ ಮುನ್ನೆಲೆಗೆ ತಂದಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಮಾಡಿದ್ದರೆ ಯಾರು ಪ್ರಶ್ನೆ ಮಾಡುತ್ತಿದ್ದಿಲ್ಲ. ತಮ್ಮ ಮೇಲೆ ಭ್ರಷ್ಟಾಚಾರದ ಆಪಾಧನೆ ಬಂದ ಬಳಿಕ ಬಿಜೆಪಿ ಅವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತೃಷ್ಟೀಕರಣದಿಂದ ರಾಜ್ಯದಲ್ಲಿ ಕೋಮು ಗಲಭೆ ನಡೆಯುತ್ತಿವೆ. ಜನರಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು. ಅದರಿಂದ ಜನರಿಗೆ ತೊಂದರೆಯಾಗಬಾರದು ಎಂದು ಹೇಳಿದರು.