ʼಆ.13 ರಿಂದ 15 ರವರೆಗೆ ರಾಜ್ಯದ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್ ಬೆಂಗಳೂರು:
ಸ್ವಾತಂತ್ರ್ಯದ ಅಮೃತೋತ್ಸವ ವರ್ಷದ ಹಿನ್ನೆಲೆಯಲ್ಲಿ ಆಗಸ್ಟ್ 13ರ ಸೂರ್ಯೋದಯದಿಂದ 15ರ ಸೂರ್ಯಾಸ್ತದ ವರೆಗೆ ರಾಜ್ಯದ ಕನಿಷ್ಠ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಗುರಿಯನ್ನು ಕರ್ನಾಟಕ ಬಿಜೆಪಿ ಹೊಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ 20 ಕೋಟಿಗಿಂತ ಹೆಚ್ಚು ಮನೆಗಳಲ್ಲಿ ಧ್ವಜಾರೋಹಣ ಮಾಡಲು ಕರೆ ಕೊಟ್ಟಿದ್ದಾರೆ. 75ನೇ ಸ್ವಾತಂತ್ರ್ಯದ ಹಬ್ಬವನ್ನು ಸಂಭ್ರಮದಿಂದ ಹಾಗೂ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಹಬ್ಬವಾಗಿ ಪ್ರಧಾನಿಯವರು ಕರೆ ಕೊಟ್ಟಿದ್ದಾರೆ ಎಂದರು.
ನಮ್ಮ 58 ಸಾವಿರ ಬೂತ್‍ಗಳು, 311 ಮಂಡಲಗಳು, 2500 ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‍ಗಳಲ್ಲಿ ಸಭೆಗಳನ್ನು ಏರ್ಪಡಿಸಲಾಗುತ್ತಿದೆ. ಪೂರ್ವ ತಯಾರಿ ನಡೆದಿದೆ. ಪೂರ್ವ ಯೋಜನೆ, ಪೂರ್ಣ ಯೋಜನೆ ಯಶಸ್ವಿ ಕಾರ್ಯ ಯೋಜನೆ ಎಂಬ ಪರಿವಾರದ ಮಾತಿನಂತೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
75 ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನೆರವೇರಲಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. 175 ಕಡೆಗಳಲ್ಲಿ ಸೈಕಲ್ ಜಾಥಾ / ಬೈಕ್ ಜಾಥಾವನ್ನು ಯುವ ಮೋರ್ಚಾ ವತಿಯಿಂದ ನಡೆಸಲಾಗುವುದು. ರೈತ ಮೋರ್ಚಾ ವತಿಯಿಂದ 75 ಕಡೆಗಳಲ್ಲಿ ಅಲಂಕೃತ ಎತ್ತಿನ ಬಂಡಿಯಲ್ಲಿ ತ್ರಿವರ್ಣ ಧ್ವಜಯಾತ್ರೆಯು ನಡೆಯಲಿದೆ. ಮಹಿಳಾ ಮೋರ್ಚಾ ನೇತೃತ್ವದಲ್ಲಿ 175 ಕಡೆಗಳಲ್ಲಿ ಕಿತ್ತೂರ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಮತ್ತಿತರರ ಭಾವಚಿತ್ರದೊಂದಿಗೆ ತ್ರಿವರ್ಣ ಧ್ವಜದ ಮಹಿಳಾ ಜಾಥಾ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ವಿಶೇಷವಾಗಿ ಬೆಳಗಾವಿ, ಚಿತ್ರದುರ್ಗ, ವಿದುರಾಶ್ವತ್ಥ, ಮಂಗಳೂರು, ಕಲಬುರ್ಗಿಯ ಸುರಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಸಂಭ್ರಮದಿಂದ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವುದು. ಅಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ತಮಟೆ ಮತ್ತಿತರ ವಾದ್ಯಗಳ ನಾದದೊಂದಿಗೆ ಬೃಹತ್ ತ್ರಿವರ್ಣಧ್ವಜ ಯಾತ್ರೆ ನಡೆಸಲಿದ್ದೇವೆ ಎಂದು ವಿವರ ನೀಡಿದರು.
ಆಗಸ್ಟ್ 10, 11, 12ರಂದು ಪಥ ಸಂಚಲನ, ಪ್ರಭಾತ್ ಪೇರಿ, ಮ್ಯಾರಥಾನ್, ವಾಕಥಾನ್, ಸೈಕ್ಲೋಥಾನ್, ಭಾರತ್ ಮಾತಾ ಪೂಜನಾ ನಡೆಯಲಿದೆ. ನಗರ ಹಾಗೂ ಹಳ್ಳಿಗಳಲ್ಲಿನ ಸರ್ಕಲ್‍ಗಳ ಅಲಂಕಾರ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ, ಪುತ್ಥಳಿಗಳ ಸ್ವಚ್ಛತೆ ಹಾಗೂ ಮಾಲಾರ್ಪಣೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಮತ್ತು ಜಿಲ್ಲಾ ಪ್ರಭಾರಿ ವಿಕಾಸ್ ಕುಮಾರ್ ಪಿ. ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!