ತ್ರಿವರ್ಣ ಧ್ವಜ ದೇಶವನ್ನು ಒಗ್ಗೂಡಿಸುವ ಸಂಕೇತ, ಅದರ ಬಗ್ಗೆ ಹಗುರ ಮಾತು ಬೇಡ: ಕಾಂಗ್ರೆಸ್ಸಿಗರಿಗೆ ಬೊಮ್ಮಾಯಿ ಪ್ರತ್ಯುತ್ತರ

ಹೊಸದಿಗಂತ ವರದಿ, ಮೈಸೂರು: 
ತ್ರಿವರ್ಣ ಧ್ವಜ ತ್ಯಾಗ, ಬಲಿದಾನ‌, ಹೋರಾಟದಿಂದ ಸಿಕ್ಕಿರುವುದು. ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಹೋರಾಟ ಮಾಡಿರುವ ಫಲವಾಗಿದ್ದು, ಸ್ವಾತಂತ್ರ್ಯ ಹೋರಾಟವನ್ನು ತಿರುಚದೇ ಸತ್ಯಾಸತ್ಯತೆ ತಿಳಿಸಬೇಕಿದೆ ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಯುವಜನ ಮಹೋತ್ಸವದಲ್ಲಿ ಭಾಗವಹಿಸಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ ಘರ್ ತಿರಂಗ ಹಾರಿಸುವ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿ, 75ನೇ ಸ್ವಾತಂತ್ರ್ಯೋತ್ಸವವನ್ನು ಸರ್ಕಾರ ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಿಸಲಿದೆ.
ಮುಂದಿನ‌ ನಮ್ಮ ದೇಶದ ಭವಿಷ್ಯ ನಮ್ಮ ಜನತೆಯ ಕೈಯ್ಯಲ್ಲಿದೆ. ತ್ರಿವರ್ಣ ಧ್ವಜದಲ್ಲಿ ಭಾರತದ ಏಕತೆ, ಶಕ್ತಿ, ಸ್ವಾತಂತ್ರ್ಯ, ಭವಿಷ್ಯ ಎಲ್ಲವೂ ಅಡಗಿದೆ. ಅದರ ಬಗ್ಗೆ ವಿರೋಧ ಮಾಡುವುದು, ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯದಂತೆ. ಅಂತಹ ಕೀಳು ಮಟ್ಟದ ಮಾತಿಗೆ ಜನತೆ ಬೆಲೆ ಕೊಡುವುದಿಲ್ಲ. ಜನ ಮತ್ತಷ್ಟು ಸ್ಪೂರ್ತಿ ಪ್ರೇರಣೆಯಿಂದ ಆಚರಣೆ ಮಾಡುತ್ತಾರೆ ಎಂದರು.
ಕೆಲವರಿಗೆ ಸ್ವಾತಂತ್ರ್ಯಹೋರಾಟದ ಇತಿಹಾಸ ಗೊತ್ತಿಲ್ಲ.ಅವರು ಅದನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ‌. ಕಾಂಗ್ರೆಸ್ ನವರು ತಿರಂಗ ಯಾತ್ರೆ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಹರ್ ಘರ್ ತಿರಂಗವನ್ನು ಅದ್ದೂರಿಯಾಗಿ, ವಿಜೃಂಭಣೆಯಿಂದ ಆಚರಿಸುತ್ತೇವೆ. ಭಾವುಟದ ಬಗ್ಗೆ ಕೀಳರಿಮೆಯಿಂದ ಮಾತನಾಡಬಾರದು. ಬಾವುಟ ದೇಶವನ್ನು ಒಗ್ಗೂಡಿಸುವ ಸಂಕೇತ. ಅದರ ಬಗ್ಗೆ ಯಾರು ಹಗುರವಾಗಿ ಮಾತನಾಡಬೇಡಿ. ಬಾವುಟ ಹಿಡಿದ  ದೇಶ ಪ್ರೇಮಿಗಳನ್ನು ಯಾರು ಟೀಕೆ ಮಾಡಬಾರದು. ಕಾಂಗ್ರೆಸ್ ಟೀಕೆಗಳಿಗೆ ಜ‌ನರು ಕಿವಿಕೊಡುವುದಿಲ್ಲ ಎಂದರು.
ಒಮಿಕ್ರಾನ್ ರೂಪಾಂತರ ತಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಿಂದ ಸೂಚನೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಂಡಿದ್ದೇವೆ. ನಿರಂತರವಾಗಿ ಅದರ ಕುರಿತು ಸಂಶೋಧನೆ ನಡೆಯುತ್ತಿದೆ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಚಿವ ಅಶ್ವಥ್ ನಾರಾಯಣ್, ನಟ ಯಶ್ ಆಗಮಿಸಿದ್ದರು.

ʼಮಳೆಹಾನಿ ಸಂಬಂಧ ಸೂಕ್ತ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಪರಿಹಾರ ನೀಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಯಾಗಿದೆʼ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!