Sunday, December 3, 2023

Latest Posts

ಸ್ಮಾರ್ಟ್ ಫೋನ್‌ನಿಂದ ಬಾಯಿ ಕ್ಯಾನ್ಸರ್ ಪತ್ತೆ: ಟ್ರಿಪಲ್ ಐಟಿ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದು. ರೋಗಗಳ ಆರಂಭಿಕ ಪತ್ತೆ ಮಾಡುವುದು ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇವುಗಳನ್ನು ಹೋಗಲಾಡಿಸುವಲ್ಲಿ ಆಧುನಿಕ ತಂತ್ರಜ್ಞಾನಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಸ್ಮಾರ್ಟ್ ಫೋನ್ ಮೂಲಕ ಬಾಯಿಯ ಕ್ಯಾನ್ಸರ್ ಅನ್ನು ಕಂಡುಹಿಡಿಯುವ ಸಂಶೋಧನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಐಹಬ್ ಡೇಟಾ ಮತ್ತು ಐಎನ್‌ಎಐ ಸಹಯೋಗದಲ್ಲಿ ನಡೆಸಿದ ಪ್ರಾಥಮಿಕ ಅಧ್ಯಯನವು ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ಗಚಿಬೌಲಿಯಲ್ಲಿರುವ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಅಧಿಕಾರಿಗಳು ತಿಳಿಸಿದ್ದಾರೆ. ಎಐ ಸಹಾಯದಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಮುಖ ಚಿಪ್ ಕಂಪನಿ ಇಂಟೆಲ್, ಟ್ರಿಪಲ್ ಐಟಿಯಲ್ಲಿ ಐಎನ್‌ಎಐ ಎಂಬ ಹೆಸರಿನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ.

ಟ್ರಿಪಲ್ ಐಟಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಭಾಷೆಗಳನ್ನು ಬಳಸಿಕೊಂಡು ಬಾಯಿಯ ಕ್ಯಾನ್ಸರ್‌ ಪತ್ತೆಹಚ್ಚಲು ವಿಶೇಷ ಮೊಬೈಲ್ ಅಪ್ಲಿಕೇಶನ್ ರಚಿಸಿರುವುದಾಗಿ ಐಎನ್ಎಐ ಸಿಇಒ ಕೊನಾಲ ವರ್ಮಾ ಹೇಳಿದ್ದಾರೆ. ಈ ಆ್ಯಪ್ ಮೂಲಕ ಬಾಯಿಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬಹುದು. ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿರುವ ಈ ವಿಧಾನವನ್ನು ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!