February 18, 2026
Wednesday, February 18, 2026
spot_img

ಸೇದೋರಿಗೂ ಸಂಕಷ್ಟ, ಮಾರೋರಿಗೂ ಇಕ್ಕಟ್ಟು: ತಂಬಾಕು ಉತ್ಪನ್ನಗಳ ಮೇಲೆ ಸುಂಕದ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರವು ಸಿಗರೇಟ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಜಾರಿಗೆ ತಂದ ಬೆನ್ನಲ್ಲೇ, ಧೂಮಪಾನಿಗಳ ಜೇಬಿಗೆ ದೊಡ್ಡ ಮೊತ್ತದ ಹೊರೆ ಬೀಳುತ್ತಿದೆ. ಒಂದು ಪ್ಯಾಕ್ ಸಿಗರೇಟ್ ಬೆಲೆಯಲ್ಲಿ ಕನಿಷ್ಠ 22 ರೂ. ನಿಂದ 55 ರೂ. ವರೆಗೆ ಏರಿಕೆಯಾಗಿದೆ.

ಸರ್ಕಾರದ ಹೊಸ ನಿಯಮದ ಪ್ರಕಾರ ವಿವಿಧ ಗಾತ್ರದ ಸಿಗರೇಟ್‌ಗಳ ಬೆಲೆ ಹೀಗಿರಲಿದೆ:

84 ಎಂಎಂ ಸಿಗರೇಟ್ (ಐಟಿಸಿ ಕಿಂಗ್, ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್): 170 ರೂ. ಇದ್ದ ದರವು 220-225 ರೂ. ಗೆ ಏರಲಿದೆ.

97 ಎಂಎಂ ಸ್ಲಿಮ್ ಸಿಗರೇಟ್ (ಕ್ಲಾಸಿಕ್ ಕನೆಕ್ಟ್): 300 ರೂ. ಇದ್ದ ಬೆಲೆಯು 350 ರೂ. ಆಗುವ ನಿರೀಕ್ಷೆಯಿದೆ.

76 ಎಂಎಂ ಸಿಗರೇಟ್ (ವಿಲ್ಸ್ ನೇವಿ ಕಟ್): ಒಂದು ಪ್ಯಾಕ್ ಬೆಲೆ 95 ರೂ. ನಿಂದ 120 ರೂ. ಗೆ ಏರಲಿದೆ.

ಹೊಸ ಸುಂಕ ಜಾರಿಯಾಗುತ್ತಿದ್ದಂತೆ ವಿತರಕರು ಭಾನುವಾರದಿಂದಲೇ ಹಳೆಯ ಸ್ಟಾಕ್‌ಗಳ ಮೇಲೆ ಹೊಸ ದರವನ್ನು ವಿಧಿಸಿ ರೀಟೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಂದಿನಿಂದ ಕಂಪನಿಗಳು ಅಧಿಕೃತವಾಗಿ ಹೊಸ ‘ಎಂಆರ್​ಪಿ’ ಹೊಂದಿರುವ ಪ್ಯಾಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ದೇಶದಲ್ಲಿ ಸುಮಾರು 1.3 ಕೋಟಿ ರೀಟೇಲ್ ವ್ಯಾಪಾರಿಗಳಿದ್ದು, ಹೆಚ್ಚಿನ ಸಣ್ಣ ಅಂಗಡಿಗಳಿಗೆ ಸಿಗರೇಟ್ ಮಾರಾಟವೇ ಆದಾಯದ ಪ್ರಮುಖ ಮೂಲವಾಗಿದೆ. ಈಗ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ, ಮಾರುಕಟ್ಟೆಗೆ ನಕಲಿ ಅಥವಾ ಕಳ್ಳ ಮಾಲುಗಳು ಪ್ರವೇಶಿಸುವ ಆತಂಕವಿದೆ ಎಂದು ‘ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ’ ಕಳವಳ ವ್ಯಕ್ತಪಡಿಸಿದೆ. ಇದು ಸಣ್ಣ ವ್ಯಾಪಾರಿಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಒಕ್ಕೂಟ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !