ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾರಿ ಮತ್ತು ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪ ಟಿಂಬರ್ ಬಳಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಬೈಕ್ ನಲ್ಲಿದ್ದ ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದ ಗಗನ್ ಎಂಬುವರಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಕೈಮರ ಕಡೆಯಿಂದ ಗಗನ್ ಕಲ್ಲಿಹಾಳ್ ಕಡೆಗೆ ತೆರಳುತ್ತಿದ್ದ. ಈ ವೇಳೆ ಲಾರಿ ಹಾಗೂ ಬೈಕ್ ಎದುರಿನಿಂದ ಬರುತ್ತಿದ್ದವು. ಲಾರಿಯನ್ನು ಓವರ್‌ಟೇಕ್ ಮಾಡಲು ಹೋಗಿ ಮೂವರಿದ್ದ ಬೈಕ್ ಗಗನ್ ಓಡಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಆಗ ಎರಡೂ ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡಿದ್ದು, ವೇಗವಾಗಿ ಚಲಿಸುತ್ತಿದ್ದ ಲಾರಿಯ ಚಕ್ರದ ಅಡಿಗೆ ಬೈಕ್‌ಗಳು ಸಿಲುಕಿವೆ. ಮೃತಪಟ್ಟ ಮೂವರ ಗುರುತು ಸಿಗದಷ್ಟು ದೇಹಗಳು ಛಿದ್ರಗೊಂಡಿವೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.