ಟ್ರೂ ಕಾಲರ್ ಇಷ್ಟಪಡೋರಲ್ಲಿ ನೀವೂ ಒಬ್ಬರಾ? ಹಾಗಾದರೆ, ಈ ವರದಿ ನಿಮ್ಮಲ್ಲಿ ಆತಂಕ ತರಲಿದೆ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಟ್ರೂ ಕಾಲರ್ ಎಂಬ ಆ್ಯಪ್ ಬಗ್ಗೆ ಗೊತ್ತಿಲ್ಲದೇ ಹೋದವರು ಕಡಿಮೆ ಅಂತಲೇ ಹೇಳಬಹುದು. ನಿಮಗೆ ಬಂದಿರುವ ಅನಾಮಧೇಯ ಕಾಲ್ ಯಾರದ್ದಾಗಿರಬಹುದು ಎಂಬ ಮಾಹಿತಿ ದೊರಕಿಸುವ ತಂತ್ರಾಂಶ ಇದು.

ಆದರೆ ವೈಸ್ರಾಯ್ ಎಂಬ ಅಧ್ಯಯನ ಸಂಸ್ಥೆ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಟ್ರೂ ಕಾಲರ್ ನಮ್ಮ ಮಾಹಿತಿಗಳ ಜತೆ ಹೇಗೆಲ್ಲ ಆಟ ಆಡುತ್ತಿದೆ ಎಂಬ ಆಯಾಮವನ್ನು ಬಹಿರಂಗಗೊಳಿಸಿದೆ. 

ಇಷ್ಟಕ್ಕೂ ಟ್ರೂ ಕಾಲರ್ ಬಳಿ ಯಾವುದೋ ಒಂದು ಫೋನ್ ನಂಬರ್ ಯಾರಾದ್ದಾಗಿರಬಹುದು ಅಂತ ಹೇಳುವ ಸಾಮರ್ಥ್ಯ ಬಂದಿದ್ದಾದರೂ ಹೇಗೆ? ಟ್ರೂ ಕಾಲರ್ ಬಳಿ 30ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಆದರೆ ಇದರ ಬಳಿ ಇರೋ ಫೋನ್ ನಂಬರುಗಳ ಡೇಟಾಬೇಸ್ 500 ಕೋಟಿಗೂ ಮಿಕ್ಕಿದೆ! 

ಅರೆ ಹೇಗಿದು ಅಂದಿರಾ? ಟ್ರೂ ಕಾಲರ್ ಬಳಸುವ ಪ್ರತಿ ವ್ಯಕ್ತಿಯಿಂದ ಈ ಆ್ಯಪ್ ಕೆಲ ಅನುಮತಿಗಳನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನವರು ಷರತ್ತುಗಳನ್ನು ಓದದೇ ಒಕೆ ಕೊಟ್ಟು ಬಳಸುತ್ತಾರೆ. ಈ ಅನುಮತಿಗಳಲ್ಲೊಂದು, ಟ್ರೂ ಕಾಲರ್ ಡೌನ್ಲೊಡ್ ಮಾಡಿಕೊಂಡ ವ್ಯಕ್ತಿಯ ಫೋನ್ ಬುಕ್ಕಿನಲ್ಲಿರುವ ಅಷ್ಟೂ ನಂಬರುಗಳ ವಿವರಗಳು ಟ್ರೂ ಕಾಲರಿಗೆ ಸೇರುತ್ತವೆ. ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ನೀವು ಟ್ರೂ ಕಾಲರ್ ಡೌನ್ಲೋಡ್ ಮಾಡದಿದ್ದರೂ ನೀವು ಬಳಸುವ ಮೊಬೈಲ್ ನಂಬರು ಯಾವುದೆಂದು ಟ್ರೂ ಕಾಲರ್ ಮಾಹಿತಿ ಕೋಶಕ್ಕೆ ಗೊತ್ತು, ಏಕೆಂದರೆ ನಿಮ್ಮ ಕಾಂಟಾಕ್ಟ್ ಸೇವ್ ಮಾಡಿಕೊಂಡಿರುವ ಯಾವುದೋ ವ್ಯಕ್ತಿ ಅಥವಾ ನಿಮ್ಮ ಸ್ನೇಹಿತ ಟ್ರೂಕಾಲರ್ ಡೌನ್ಲೋಡ್ ಮಾಡಿಕೊಂಡಿರುವುದರ ಪರಿಣಾಮವಾಗಿ, ಆ ವ್ಯಕ್ತಿಯ ಫೋನಿನಲ್ಲಿ ನಿಮ್ಮ ಹೆಸರಿನಲ್ಲಿ ಸೇವ್ ಆಗಿರುವ ಸಂಪರ್ಕ ಮಾಹಿತಿ ಟ್ರೂ ಕಾಲರಿಗೆ ಲಭಿಸಿದೆ.

ಅಧ್ಯಯನ ವರದಿ ಪ್ರಕಾರ ಟ್ರೂ ಕಾಲರ್ ಆದಾಯದ ಶೇ.70 ಭಾಗ ಭಾರತದಿಂದ ಬರುತ್ತಿದ್ದರೂ ಅದು ಭಾರತದಲ್ಲಿ ಕಂಪನಿಯನ್ನು ನೊಂದಾಯಿಸಿಲ್ಲ. ಇಲ್ಲಿ ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಟ್ರೂ ಕಾಲರ್ ತನ್ನನ್ನು ಸ್ವೀಡನ್ನಿನ ಕಂಪನಿಯಾಗಿ ನೊಂದಾಯಿಸಿಕೊಂಡಿದೆ, ಆದರೆ ಮಾಹಿತಿಗಳನ್ನು ಭಾರತದಲ್ಲೇ ಸಂಗ್ರಹಿಸಿಟ್ಟಿರುವುದಾಗಿ ಹೇಳಿಕೊಳ್ಳುತ್ತದೆ. ಏಕೆಂದರೆ ಯುರೋಪಿನ ದೇಶಗಳಲ್ಲಿ ಹೀಗೆ ಬೇರೆಯವರ ಫೋನ್ ಸಂಗ್ರಹದ ಮಾಹಿತಿಗಳನ್ನು ಎತ್ತಿಕೊಳ್ಳುವುದನ್ನು ಪ್ರತಿಬಂಧಿಸುವ ಕಾನೂನುಗಳಿವೆ. ಭಾರತದಲ್ಲಿ ಡೇಟಾ ಅಥವಾ ಮಾಹಿತಿ ಸಂಗ್ರಹದ ಸಂಬಂಧ ಸಮಗ್ರ ಕಾಯ್ದೆ ಇನ್ನೂ ರೂಪುಗೊಂಡಿಲ್ಲವಾದ್ದರಿಂದ ಟ್ರೂ ಕಾಲರ್ ಅದರ ಲಾಭ ಪಡೆದಿದೆ.

ಟ್ರೂ ಕಾಲರ್ ನಿಮ್ಮ ಎಸ್ ಎಂ ಎಸ್ ಸಹ ಓದಿ ಅದರಲ್ಲಿರುವ ಹಣಕಾಸು ವಹಿವಾಟುಗಳ ಆಧಾರದ ಮೇಲೆ ನಿಮ್ಮ ಹಣಕಾಸು ಸಾಮರ್ಥ್ಯದ ಪ್ರೊಫೈಲ್ ತಯಾರಿಸಿ ಆಸಕ್ತ ಗುಂಪುಗಳಿಗೆ ಮಾರುತ್ತದೆ ಎಂಬ ಆಪಾದನೆಯೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!