ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದು, ಕೆಲವು ಫಾರ್ಮಾ ಉತ್ಪನ್ನಗಳ ಮೇಲೆ ಶೇ.100ರಷ್ಟು ಟ್ಯಾರಿಫ್ ವಿಧಿಸುವ ಹೊಸ ನೀತಿಯನ್ನು ಘೋಷಿಸಿದ್ದಾರೆ.
ಈ ಕ್ರಮವು ವಿಶೇಷವಾಗಿ ಅಮೆರಿಕದ ‘ಮೋಸ್ಟ್ ಫೇವರ್ಡ್ ನೇಶನ್’ (MFN) ದರ ವ್ಯವಸ್ಥೆಗೆ ಸೇರದ ಕಂಪನಿಗಳು ಮತ್ತು ದೇಶಗಳನ್ನು ಗುರಿಯಾಗಿಸಿದೆ. ಹೊಸ ಆದೇಶದ ಪ್ರಕಾರ ಪೇಟೆಂಟ್ ಹೊಂದಿರುವ ಔಷಧ ಉತ್ಪನ್ನಗಳು ಮತ್ತು ಸಂಬಂಧಿತ ಇನ್‌ಪುಟ್‌ಗಳ ಮೇಲೆ ಈ ಸುಂಕ ಅನ್ವಯವಾಗಲಿದೆ.
ಅಮೆರಿಕ ಸರ್ಕಾರದ ಸೂಚನೆಯಂತೆ, ದೊಡ್ಡ ಫಾರ್ಮಾ ಕಂಪನಿಗಳಿಗೆ 120 ದಿನಗಳ ಮತ್ತು ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಅಥವಾ MFN ದರ ಒಪ್ಪಂದಕ್ಕೆ ಸೇರ್ಪಡೆಯಾಗಲು ಅವಕಾಶವಿದೆ. ಇದಕ್ಕೆ ಒಪ್ಪಿದ ಕಂಪನಿಗಳಿಗೆ ಸುಂಕದಲ್ಲಿ ವಿನಾಯಿತಿ ಅಥವಾ ಕಡಿತ ದರ ಅನ್ವಯವಾಗಲಿದೆ.
ಇದನ್ನೂ ಓದಿ:
ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ, ಸ್ವಿಟ್ಜರ್‌ಲ್ಯಾಂಡ್ ಮೊದಲಾದ ಅಮೆರಿಕದ ವ್ಯಾಪಾರ ಒಪ್ಪಂದ ಹೊಂದಿರುವ ದೇಶಗಳಿಗೆ ಸುಂಕ ದರ ಕಡಿಮೆ ಮಟ್ಟದಲ್ಲಿರಲಿದ್ದು, ಭಾರತದಂತಹ ಒಪ್ಪಂದವಿಲ್ಲದ ದೇಶಗಳ ಫಾರ್ಮಾ ಕಂಪನಿಗಳು ಹೆಚ್ಚಿನ ಒತ್ತಡ ಎದುರಿಸಬೇಕಾಗಬಹುದು. ಆದರೆ ಸಾಮಾನ್ಯ ಜನರಿಕ್ ಔಷಧಿಗಳಿಗೆ ಈ ಹಂತದಲ್ಲಿ ಸುಂಕ ಅನ್ವಯವಾಗುವುದಿಲ್ಲ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಉಕ್ಕು, ಅಲ್ಯೂಮಿನಿಯಂ ಮತ್ತು ಕಾಪರ್ ಆಮದು ಮೇಲಿನ ಸುಂಕ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಅಮೆರಿಕದ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.



