June 20, 2026
Saturday, June 20, 2026
spot_img

‘ದಿ ಆಕ್ಸಿಯೋಸ್ ಶೋ’ನಲ್ಲಿ ಮೋದಿ ಗುಣಗಾನ ಮಾಡಿದ ಟ್ರಂಪ್: ಭಾರತದ ಯಶಸ್ಸಿಗೆ ಪ್ರಧಾನಿಯೇ ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಪ್ರಭಾವಶಾಲಿ ನಾಯಕರು ಎಂದು ಬಣ್ಣಿಸಿದ್ದಾರೆ. ಜನಪ್ರಿಯ ‘ದಿ ಆಕ್ಸಿಯೋಸ್ ಶೋ’ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ವಿಭಿನ್ನ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಧೀರ ನಾಯಕ (Tough Cookie) ಎಂದು ಕರೆದಿದ್ದಾರೆ.

ಯುದ್ಧಗಳಿಂದ ಭಾರತವನ್ನು ದೂರವಿಟ್ಟ ಜಾಣ್ಮೆ

“ಭಾರತವು ಇಂದು 150 ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವದ ಅತಿ ದೊಡ್ಡ ದೇಶವಾಗಿದೆ. ಇಷ್ಟು ಬೃಹತ್ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಮೋದಿ ಅವರು ಜಾಗತಿಕ ಯುದ್ಧಗಳು ಮತ್ತು ಸಂಘರ್ಷಗಳಿಂದ ಭಾರತವನ್ನು ದೂರ ಇಟ್ಟಿದ್ದಾರೆ. ಇದು ಅವರ ಅತ್ಯಂತ ಜಾಣ್ಮೆಯ ನಿರ್ಧಾರ” ಎಂದು ಟ್ರಂಪ್ ಶ್ಲಾಘಿಸಿದ್ದಾರೆ. ಚೀನಾ ಅಧ್ಯಕ್ಷ ಸಂಪೂರ್ಣ ವ್ಯವಹಾರಿಕ ನಾಯಕ ಎಂದೂ ಅವರು ಇದೇ ವೇಳೆ ತಿಳಿಸಿದರು.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ

ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆ ಮಾತನಾಡಿದ ಟ್ರಂಪ್, “ಹಿಂದಿನ ಅಮೆರಿಕ ರಾಜಕಾರಣಿಗಳ ತಪ್ಪು ನಿರ್ಧಾರಗಳಿಂದಾಗಿ ಈ ಮುಂಚೆ ವ್ಯಾಪಾರದಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗುತ್ತಿತ್ತು. ಆದರೆ ಇಂದು ನಾವು ನ್ಯಾಯೋಚಿತ ನಿಯಮಗಳ ಅಡಿಯಲ್ಲಿ ಬೃಹತ್ ಪ್ರಮಾಣದ ವ್ಯವಹಾರ ಮಾಡುತ್ತಿದ್ದೇವೆ. ಹೊಸ ನಿಯಮಗಳು ಮೊದಲಿನಷ್ಟು ಲಾಭ ತರದಿದ್ದರೂ, ಪ್ರಧಾನಿ ಮೋದಿ ಅವರ ಸಕಾರಾತ್ಮಕ ನೇತೃತ್ವದಿಂದಾಗಿ ಉಭಯ ದೇಶಗಳ ನಡುವಿನ ಉದ್ಯಮ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿದೆ” ಎಂದಿದ್ದಾರೆ.

ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು

ಭಾರತದಲ್ಲಿ ಪ್ರತಿಪಕ್ಷಗಳು ‘ಟ್ರಂಪ್ ತಾಳಕ್ಕೆ ತಕ್ಕಂತೆ ಮೋದಿ ಕುಣಿಯುತ್ತಾರೆ’ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ, ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷರೇ ಮೋದಿಯವರನ್ನು ಕಠಿಣ ನಾಯಕ ಎಂದು ಕರೆದಿರುವುದು ಮತ್ತು ಈ ಹಿಂದಿನ ವ್ಯವಹಾರಗಳಲ್ಲಿ ಭಾರತಕ್ಕೇ ಹೆಚ್ಚು ಪ್ರಯೋಜನವಾಗಿದೆ ಎಂದು ಒಪ್ಪಿಕೊಂಡಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !