ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡೆಸಿದ ಚರ್ಚೆ ಉದ್ವಿಗ್ನತೆ ಪಡೆದುಕೊಂಡಿದ್ದು, ಚರ್ಚೆ ವೇಳೆ ನಡೆದ ವಾಗ್ವಾದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.
ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ಬಿಸಿ ಚರ್ಚೆ ನಡೆಯಿತು. ನೀವು ಶಾಂತಿ ಬಯಸಿದರೆ ಮಾತ್ರ ಅಮೆರಿಕಕ್ಕೆ ಬನ್ನಿ ಎಂದು ಖಡಕ್ ಎಚ್ಚರಿಕೆ ಕೊಟ್ಟು ಉಕ್ರೇನ್ ಅಧ್ಯಕ್ಷರನ್ನು ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ಹೊರಗಟ್ಟಿದ್ದಾರೆ.
ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಈ ವಿದ್ಯಮಾನ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.
ಝೆಲೆನ್ಸ್ಕಿ ಉಕ್ರೇನ್‌ಗೆ ಯುಎಸ್ ಬೆಂಬಲವನ್ನು ಕೋರಿದರು. ಆದರೆ ಈ ಭೇಟಿ ಒಪ್ಪಂದಕ್ಕೆ ಸಹಿ ಹಾಕದೇ ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವುದರೊಂದಿಗೆ ಕೊನೆಗೊಂಡಿತು. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ವ್ಯಾನ್ಸ್ ತೀವ್ರವಾಗಿ ಟೀಕಿಸಿದರು. ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.