ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ದೇಶದ ಮೇಲೆ “ಅತ್ಯಂತ ಭೀಕರ” ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ವಾರಾಂತ್ಯದಲ್ಲೇ ಇರಾನ್ ಮೇಲೆ ಬೃಹತ್ ಬಾಂಬ್ ದಾಳಿಗಳು ನಡೆಯಬಹುದು ಎಂಬ ಮುನ್ಸೂಚನೆ ನೀಡಲಾಗಿದೆ.
ವರದಿಯ ಪ್ರಕಾರ, ಇರಾನ್ ರಾಜಧಾನಿ ತಹರಾನ್ ಸಂಪೂರ್ಣವಾಗಿ ಶರಣಾಗುವಂತೆ ಮಾಡಲು ಅಲ್ಲಿನ ಮಿಲಿಟರಿ ನೆಲೆಗಳ ಮೇಲೆ ಹೊಸದಾಗಿ ದಾಳಿ ನಡೆಸುವಂತೆ ಟ್ರಂಪ್ ತಮ್ಮ ಸನ್ಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೇರಿಲ್ಯಾಂಡ್‌ನ ಕ್ಯಾಂಪ್ ಡೇವಿಡ್ ಅಧ್ಯಕ್ಷೀಯ ನಿವಾಸದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಟ್ರಂಪ್, “ನಾವು ಅವರ ಮೇಲೆ ಅತ್ಯಂತ ಭೀಕರವಾಗಿ ದಾಳಿ ಮಾಡಲಿದ್ದೇವೆ. ಒಂದು ಹಂತದಲ್ಲಿ ಅವರು ‘ನಮಗೆ ಇನ್ನು ಮುಂದೆ ಇದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಶರಣಾಗುವಂತೆ ಮಾಡುತ್ತೇವೆ” ಎಂದಿದ್ದಾರೆ. ಅಲ್ಲದೆ, ಇರಾನ್ ನಿರಂತರವಾಗಿ ಸುಳ್ಳು ಹೇಳುತ್ತಾ ದಾರಿ ತಪ್ಪಿಸುತ್ತಿದೆ, ಹೀಗಾಗಿ ಆ ದೇಶದ ಮೇಲಿನ ವಿಶ್ವಾಸವನ್ನು ತಾವೀಗ ಕಳೆದುಕೊಂಡಿರುವುದಾಗಿ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಧನ ಮೂಲಸೌಕರ್ಯಗಳೇ ಟಾರ್ಗೆಟ್:
ಇರಾನ್‌ನ ಇಂಧನ ಮೂಲಸೌಕರ್ಯಗಳು ಮತ್ತು ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಬಾಂಬ್ ದಾಳಿ ನಡೆಸಲು ಯೋಜನೆ ರೂಪಿಸಿವೆ. ಒಂದು ವೇಳೆ ಈ ದಾಳಿ ನಡೆದರೆ, ಇತ್ತೀಚಿನ ಕದನ ವಿರಾಮದ ಬಳಿಕ ಇಸ್ರೇಲ್ ಮತ್ತೆ ಯುದ್ಧ ಕಾರ್ಯಾಚರಣೆಗೆ ಅಧಿಕೃತವಾಗಿ ಇಳಿದಂತಾಗುತ್ತದೆ. ಆದರೆ, ಈ ದಾಳಿಯು ಜಾಗತಿಕ ಮತ್ತು ಅಮೆರಿಕದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಭೀತಿ ಎದುರಾಗಿದೆ.
‘ಲಾಕ್ಡ್ ಅಂಡ್ ಲೋಡೆಡ್’ ಎಂದ ಪೆಂಟಗನ್:
ಟ್ರಂಪ್ ಈ ಎಚ್ಚರಿಕೆಯ ಬೆನ್ನಲ್ಲೇ ವೈಟ್ ಹೌಸ್ ಪ್ರೆಸ್ ಸೆಕ್ರೆಟರಿ ಕ್ಯಾರೋಲಿನ್ ಲೀವಿಟ್ ಪ್ರತಿಕ್ರಿಯಿಸಿ, “ಅಮೆರಿಕ ಈ ಯುದ್ಧದಲ್ಲಿ ಗೆಲ್ಲಲಿದೆ. ಟ್ರಂಪ್ ಅವಧಿಯಲ್ಲಿ ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವುದಕ್ಕೆ ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ಮುಖ್ಯ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ಕೂಡ ರಕ್ಷಣಾ ಇಲಾಖೆಯು ದಾಳಿಗೆ ಸಂಪೂರ್ಣವಾಗಿ “ಲಾಕ್ಡ್ ಅಂಡ್ ಲೋಡೆಡ್” ಆಗಿದೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ:
ಹಾರ್ಮುಜ್ ಜಲಸಂಧಿ ಬಂದ್ ಬೆನ್ನಲ್ಲೇ ಉಲ್ಬಣಿಸಿದ ಸಂಘರ್ಷ:
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದಾಗಿನಿಂದ ಈ ಸಂಘರ್ಷ ಆರಂಭವಾಗಿತ್ತು. ಕಳೆದ ತಿಂಗಳು ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದರೂ, ಉಭಯ ದೇಶಗಳ ನಡುವೆ ಆಂತರಿಕ ದಾಳಿಗಳು ನಿಂತಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಇರಾನ್ ಇತ್ತೀಚೆಗೆ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿ ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಭಾರೀ ಅಡ್ಡಿಪಡಿಸಿತ್ತು. ಈ ವಾರ ಈಜಿಪ್ಟ್‌ನ ಬಂದರಿನಲ್ಲಿ ಎರಡು ಎಲ್‌ಎನ್‌ಜಿ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದ ನಂತರ ಇಡೀ ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ.



