Tuesday, September 30, 2025

ಸತ್ಯ – ಮಿಥ್ಯ | ಸಸ್ಯಾಹಾರಿಗಳ ಆಯಸ್ಸು ಮಾಂಸಾಹಾರಿಗಳಿಗಿಂತ ಜಾಸ್ತಿ ಇರುತ್ತಂತೆ ಹೌದಾ?

ಸಸ್ಯಾಹಾರವನ್ನು ಸಾತ್ವಿಕ ಆಹಾರವೆಂದು ಪರಿಗಣಿಸುವ ಪರಂಪರೆ ಅನೇಕ ಧರ್ಮಗಳಲ್ಲಿ ಹಲವು ಶತಮಾನಗಳಿಂದ ಬೇರೂರಿದೆ. ಜಗತ್ತಿನಾದ್ಯಂತ ಶಾಖಾಹಾರಿಗಳು ಮತ್ತು ಮಾಂಸಾಹಾರಿಗಳು ಇದ್ದರೂ, ಶಾಖಾಹಾರಿಗಳು ಹೆಚ್ಚು ಕಾಲ ಬಾಳುತ್ತಾರೆ ಎಂಬ ವಾದವನ್ನು ಹಲವಾರು ಅಧ್ಯಯನಗಳು ಮತ್ತು ಉದಾಹರಣೆಗಳು ಬೆಂಬಲಿಸುತ್ತವೆ. ತಜ್ಞರ ಪ್ರಕಾರ ಶಾಖಾಹಾರದ ಕೆಲ ಪ್ರಮುಖ ಗುಣಗಳು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತವೆ.

ಶಾಖಾಹಾರದಲ್ಲಿ ಕೊಲೆಸ್ಟ್ರಾಲ್ ಮತ್ತು ಹಾನಿಕಾರಕ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಇದರ ಫಲವಾಗಿ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೆಚ್ಚಳ ತಡೆಯಲು ಸಹಾಯಕವಾಗುತ್ತದೆ. ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಸಸ್ಯಾಹಾರದಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ಸ್ ಮತ್ತು ಫೈಬರ್‌ಗಳ ಪ್ರಮಾಣ ಹೆಚ್ಚು ಇರುತ್ತದೆ. ಇವು ಜೀರ್ಣಕ್ರಿಯೆ ಸುಗಮವಾಗಿಸಲು, ಮಲಬದ್ಧತೆಯನ್ನು ತಡೆಯಲು ಮತ್ತು ದೇಹಕ್ಕೆ ಬೇಕಾದ ಶಕ್ತಿ ಪೂರೈಸಲು ನೆರವಾಗುತ್ತವೆ. ಮಾಂಸಾಹಾರದಲ್ಲಿ ಇಷ್ಟು ಪೌಷ್ಠಿಕ ಅಂಶಗಳು ದೊರೆಯುವುದಿಲ್ಲ ಎಂಬುದು ತಜ್ಞರ ವಾದ.

ಆಂಟಿಆಕ್ಸಿಡೆಂಟ್ಸ್ ಹಾಗೂ ಫೈಟೋಕೆಮಿಕಲ್ಸ್‌ನ ಅಂಶಗಳು ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ಶಾಖಾಹಾರಿಗಳು ಕೊಲೊನ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಬಾಧೆಗೊಳಗಾಗುವ ಸಾಧ್ಯತೆ ಕಡಿಮೆ.

ಇನ್ನೊಂದು ಮಹತ್ವದ ಅಂಶವೆಂದರೆ ಶಾಖಾಹಾರಿ ಆಹಾರ ಕ್ರಮವು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಹಾಗೂ ತಡೆಯಲು ಸಹಾಯಕವಾಗುತ್ತದೆ. ವಿಶೇಷವಾಗಿ ಡಯಾಬಿಟಿಸ್ ಟೈಪ್ 2 ತಡೆಯಲು ಸಸ್ಯಾಹಾರವನ್ನು ತಜ್ಞರು ಶಿಫಾರಸು ಮಾಡುತ್ತಾರೆ.

ಅಧ್ಯಯನಗಳ ಪ್ರಕಾರ, ಶಾಖಾಹಾರಿಗಳು ಸರಾಸರಿ 6 ರಿಂದ 8 ವರ್ಷ ಹೆಚ್ಚು ಕಾಲ ಬಾಳುವ ಸಾಧ್ಯತೆ ಇದೆ. ಆದರೆ ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸುವ ನಿಯಮವಲ್ಲ. ಸರಿಯಾದ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಶಾಖಾಹಾರವನ್ನು ಅನುಸರಿಸಿದರೆ ದೀರ್ಘಕಾಲ ಬಾಳುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.