ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ಐದು ಅಸ್ಥಿಪಂಜರ ಕೇಸ್‌ನ ಮರಣೋತ್ತರ ವರದಿ ಪೊಲೀಸರ ಕೈಸೇರಿದೆ.
ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ದೊರೆತಿದ್ದು, ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿತ್ತು. ಇದು ಆತ್ಮಹತ್ಯೆಯಾ? ಕೊಲೆಯಾ? ಎಂದು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿತ್ತು. ಆದರೆ ವರದಿ ಬಂದ ನಂತರವೂ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಮಾಹಿತಿ ಹೊರಬಿದ್ದಿಲ್ಲ.
ಕಳೆದ ವಾರವೇ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ರಿಪೋರ್ಟ್‌ನ್ನು ನೆನ್ನೆ ಪೊಲೀಸರಿಗೆ ನೀಡಲಾಗಿದೆ. ವರದಿಯಲ್ಲಿ ಘಟನೆಗೆ ಸಂಬಂಧಿಸಿದ ಯಾವುದೇ ಸುಳಿವು ಸಿಕ್ಕಿಲ್ಲ. ಎಫ್‌ಎಸ್‌ಎಲ್( ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ಟೆಸ್ಟ್) ವರದಿ ಬಾಕಿ ಇದ್ದು, ಇದರಲ್ಲಿ ಏನಾದರೂ ಸುಳಿವು ಸಿಗಬಹುದೇ ಎಂದು ಪೊಲೀಸರು ಆಲೋಚಿಸಿದ್ದಾರೆ.
ಹಿನ್ನೆಲೆ ಏನು?
ಚಿತ್ರದುರ್ಗದ ಚಳ್ಳಕೆರೆಯ ಟೋಲ್‌ಗೇಟ್ ಬಳಿಯ ಪಾಳು ಬಿದ್ದ ಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದೆ. ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಕ್ಕ, ಮಕ್ಕಳಾದ ತ್ರಿವೇಣಿ, ಕೃಷ್ಣರೆಡ್ಡಿ ಹಾಗೂ ನರೇಂದ್ರ ಮೃತರು. ಕೆಲವು ವರ್ಷಗಳಿಂದಲೇ ಯಾರೊಂದಿಗೂ ಈ ಕುಟುಂಬ ಸಂಪರ್ಕದಲ್ಲಿ ಇರಲಿಲ್ಲ. ಜಮೀನಿನ ವಿವಾದ ಇದ್ದು, ಕುಟುಂಬಕ್ಕೆ ವ್ಯಕ್ತಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿತ್ತು.