ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವನಿರ್ದೇಶಕ ಸಂತೋಷ್ ಮಾಡ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ತುಳು ಚಲನಚಿತ್ರ “ಜೀಟಿಗೆ”ಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ.
ಕೊರಗಜ್ಜನ ಕಾರಣಿಕ ತೋರಿಸುವ ಮೊದಲ ತುಳು ಸಿನಿಮಾ “ಜೀಟಿಗೆ”ಯಲ್ಲಿ ನವೀನ್ ಪಡೀಲ್ ಮತ್ತು ರೂಪ ವರ್ಕಾಡಿ ಅವರ ಅಭಿನಯ ಅದ್ಭುತವಾಗಿದ್ದು, ಇದೀಗ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿರುವುದು ವಿಶೇಷವಾಗಿದೆ. ಈ ಹಿಂದೆ ಸಂತೋಷ್ ಮಾಡಾ ಅವರು ‘ಜೀಟಿಗೆ’ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ದಿನಗಳ ಹಿಂದಷ್ಟೇ ಸಂತೋಷ್ ಮಾಡ ಅವರ ನಿರ್ದೇಶನದ ಇನ್ನೊಂದು ತುಳು ಚಲನಚಿತ್ರ “ಪಿದಾಯಿ”ಗೆ ಬೆಂಗಳೂರಿನಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2ನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರ ತಂಡದ ಹರ್ಷ
ಮೊದಲ ಸಿನಿಮಾ ಜೀಟಿಗೆಯಲ್ಲಿ ಕೊರಗಜ್ಜನ ಕಾರ್ಣಿಕದ ಕಥೆ ಹೇಳುವ ಪ್ರಯತ್ನವನ್ನು ಶಶಿರಾಜ್ ಕಾವೂರ್ ಜೊತೆ ಮಾಡಿದ್ದೆವು. ಜೀಟಿಗೆ ಸಿನಿಮಾವನ್ನು ಗುರುತಿಸಿ ರಾಜ್ಯ ಪುರಸ್ಕಾರವನ್ನು ನೀಡಿದಕ್ಕೆ ತೀರ್ಪುಗಾರರಿಗೆ ಜೀಟಿಗೆ ತಂಡದ ಪರವಾಗಿ ಧನ್ಯವಾದಗಳು ಎಂದು ನಿರ್ದೇಶಕ ಸಂತೋಷ್ ಮಾಡ ಅವರು ತಿಳಿಸಿದ್ದು, ಸಿನಿಮಾವನ್ನು ಶೀಘ್ರದಲ್ಲೇ ಚಿತ್ರಮಂದಿರದಲ್ಲಿ ಬಿಡುಗಡೆ ಗೊಳಿಸುವುದಾಗಿ ನಿರ್ಮಾಪಕರಾದ ಅರುಣ್ ರೈ ತೋಡಾರ್ ಅವರು ತಿಳಿಸಿದ್ದಾರೆ.