ತುಮಕೂರಿನಲ್ಲಿ ಭೀಕರ ಅಪಘಾತ: ಬಸ್‌ ಪಲ್ಟಿಯಾಗಿ ನಾಲ್ವರು ಸಾವು, 45ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ವರದಿ, ತುಮಕೂರು
ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಖಾಸಗಿ ಬಸ್ ಉರುಳಿಬಿದ್ದು ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಬಸ್ಸು ತಾಲೂಕಿನ ವೈ ಎನ್. ಹೊಸಕೋಟೆಯಿಂದ ಪಾವಗಡಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಬಸ್‌ ನಲ್ಲಿದ್ದ ಸುಮಾರು 45ಕ್ಕೂ ಹೆಚ್ಚಿನ ಜನರಿಗೆ ತೀವ್ರಸ್ವರೂಪದ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರು ಮತ್ತು ತುಮಕೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್ ನಲ್ಲಿ ಸುಮಾರು 70ಕ್ಕೂ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ಸಿನ ಮೇಲ್ಬಾಗದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಪಾವಗಡಕ್ಕೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ತಾಲೂಕಿನಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದ್ದು, ಬಸ್ ನ ಒಳಗೆ, ಟಾಪ್ ಮೇಲೆ ಪ್ರಯಾಣಿಕರನ್ನು ಪಶುಗಳಂತೆ ತುಂಬಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿರುತ್ತದೆ. ಕನಿಷ್ಠ ಪಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದಲಾದರೂ ಬೆಳಗ್ಗೆ- ಸಂಜೆ ಸರ್ಕಾರಿ ಬಸ್ ಗಳ ಸಂಚಾರಕ್ಕೆ ಸರ್ಕಾರ ಅನುವುಮಾಡಿಕೊಡಬೇಕು ಎಂದು ಜನರು ಆಗ್ರಹಿಸುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!