ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ಯೂನ ಮೀನು ರಫ್ತುಮಾಡುವಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರ ಮೇಲೆ ಸಿಬಿಐ ತನಿಖೆ ಜಾರಿ ಮಾಡಿದೆ. ಹಾಗೂ ಅವರ ಸೋದರಳಿಯ ಅಬ್ದುಲ್ ರಜಾಕ್ ಮತ್ತು ಕೋಲಂಬೋ ಮೂಲದ ಆಮದು ರಫ್ತಿನ ಕಂಪನಿ ಎಸ್‌ಆರ್‌ಟಿ ಜನರಲ್ ಮರ್ಚೆಂಟ್ಸ್ ವಿರುದ್ಧವೂ ಸಿಬಿಐ ತನಿಖೆ ನಡೆಸುತ್ತಿದೆ.
ಈ ಕುರಿತು ಸುಮಾರು 25 ಸಿಬಿಐ ಅಧಿಕಾರಿಗಳ ತಂಡ ಹಾಗೂ ಲಕ್ಷದ್ವೀಪ ಆಡಳಿತದ ವಿಜಿಲೆನ್ಸ್ ಅಧಿಕಾರಿಗಳು, ಲಕ್ಷದ್ವೀಪ ಆಡಳಿತದ ವಿವಿಧ ಇಲಾಖೆಗಳಲ್ಲಿ ದಿಢೀರ್ ಜಂಟಿ ತಪಾಸಣೆ ನಡೆಸುತ್ತಿದ್ದಾರೆ. ಈ ಇಲಾಖೆಗಳಲ್ಲಿ ಲಕ್ಷದ್ವೀಪ ಸಹಕಾರ ಮಾರಾಟ ಒಕ್ಕೂಟ (LCMF), ಮೀನುಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಖಾದಿ ಮಂಡಳಿ ಮತ್ತು ಸಹಕಾರ ಸಂಘ ಮತ್ತು ಪಶುಸಂಗೋಪನಾ ಇಲಾಖೆ ಸೇರಿವೆ.
ಸಿಬಿಐ ಪ್ರಕಾರ, ಎಲ್‌ಸಿಎಂಎಫ್‌ನ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಶಾಮೀಲಾಗಿ ಎಸ್‌ಆರ್‌ಟಿ ಜನರಲ್ ಮರ್ಚೆಂಟ್‌ಗಳಿಗೆ ಟ್ಯೂನ ಮೀನುಗಳನ್ನು ರಫ್ತು ಮಾಡುವ ವಿಷಯದಲ್ಲಿ ಅಗತ್ಯವಾದ ಟೆಂಡರ್ ಪ್ರಕ್ರಿಯೆ ಮತ್ತು ಇತರ ಔಪಚಾರಿಕತೆಗಳನ್ನು ಅನುಸರಿಸದೆ ಎಲ್‌ಸಿಎಂಎಫ್‌ಗೆ ನಷ್ಟ ಉಂಟು ಮಾಡಿದ್ದಾರೆ. ಸಂಸದ ಫೈಝಲ್ ಅವರ ಪ್ರಭಾವವನ್ನು ಬಳಸಿಕೊಂಡು ಎಲ್‌ಸಿಎಂಎಫ್ ಸ್ಥಳೀಯ ಮೀನುಗಾರರಿಂದ ಹೆಚ್ಚಿನ ಪ್ರಮಾಣದ ಟ್ಯೂನ ಮೀನುಗಳನ್ನು ಸಂಗ್ರಹಿಸಿದೆ, ಅದನ್ನು ಎಸ್‌ಆರ್‌ಟಿ ಜನರಲ್ ಮರ್ಚೆಂಟ್ಸ್‌ಗೆ ರಫ್ತು ಮಾಡಲಾಗಿದೆ. ಆದರೆ ಕಂಪನಿಯು ಇದಕ್ಕೆ ಪಾವತಿ ಮಾಡಿಲ್ಲ ಎಂದು ಸಿಬಿಐ ಆರೋಪಿಸಿದೆ.
ಸಿಬಿಐ ಮೂಲಗಳ ಪ್ರಕಾರ, ಫೈಝಲ್ ಅವರ ಸೋದರಳಿಯ ರಜಾಕ್ ಎಸ್‌ಆರ್‌ಟಿ ಕಛೇರಿಯ ಅಧಿಕಾರಿಗಳಲ್ಲೊಬ್ಬರು. ಆದರೆ ಈ ಆರೋಪವನ್ನು ಸಂಸದ ತಳ್ಳಿಹಾಕಿದ್ದು “ಖರೀದಿದಾರರು ಉತ್ತಮ ಬೆಲೆಯನ್ನು ನೀಡಿದ್ದರಿಂದ ಮೀನುಗಳನ್ನು ಎಸ್‌ಆರ್‌ಟಿಗೆ ಮಾರಾಟ ಮಾಡಲಾಗಿದೆ, ಇದರಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ” ಎಂದು ಪ್ರತಿಕ್ರಿಯಿಸಿರುವುದಾಗಿ ಮೂಲಗಳು ವರದಿ ಮಾಡಿವೆ.