ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂ 70 ವರ್ಷಗಳ ಹಳೆಯದ್ದು. ಡ್ಯಾಂ ಸೇಫ್ಟಿ ವರದಿ ನೀಡಲು ಮಾಡಿದ್ದ ಸಮಿತಿಗಳು ಸರಿಯಾಗಿ ಮಾಹಿತಿ ಕೊಟ್ಟಿಲ್ಲ. 133 ಟಿಎಂಸಿ ನೀರು ರಾಜ್ಯಕ್ಕೆ ಪಡೆಯಲು ಡ್ಯಾಂ ಕಟ್ಟಿದ್ದು.73 ಟಿಎಂಸಿ ಆಂದ್ರಕ್ಕೆ ಅಂತ ಆಗಿದೆ. 133 ಟಿಎಂಸಿಯಲ್ಲಿ ಈಗ 33 ಟಿಎಂಸಿ ಹೂಳು ತುಂಬಿಕೊಂಡಿದೆ. ಈಗ ಗೇಟ್ ಕೊಚ್ಚಿ ಹೋಗಿದೆ. ಡ್ಯಾಂ ಸೇಫ್ಟಿಗಾಗಿ ಇರುವ ಸಮಿತಿ ಎಲ್ಲವನ್ನು ಪರಿಶೀಲನೆ ಮಾಡಬೇಕು. ಸೇಫ್ಟಿ ಕಮಿಟಿ ಸಮಿತಿ ಮಾಹಿತಿ ಸರಿಯಾಗಿ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.
ಈ ಸರ್ಕಾರದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡೋಕೆ ಹಣ ನೀಡುವ ವ್ಯವಸ್ಥೆಯನ್ನು ಮೊದಲು ನಿಲ್ಲಿಸಿ. ಚೀಫ್ ಎಂಜಿನಿಯರ್ ಪೋಸ್ಟಿಂಗ್ ಮಾಡಲು ಎಷ್ಟು ಫಿಕ್ಸ್ ಮಾಡಿದ್ದೀರಿ? ನಾನು 14 ತಿಂಗಳು ಇವರ ಜೊತೆ ಇದ್ದು ಅನುಭವಿಸಿದ್ದೇನೆ. ಅವರು ಹೇಳಿದಂತೆ ನಾನು ಕೇಳಿದ್ದೇನೆ. ಚೀಫ್ ಎಂಜಿನಿಯರ್ ಸೇರಿ ಎಲ್ಲಾ ಪೋಸ್ಟ್ ಗೆ ಇಷ್ಟು ಹಣ ಅಂತ ನಿಗದಿ ಮಾಡಿ ಬಿಟ್ಟಿದ್ದಾರೆ. ಹಣ ಕೊಟ್ಟವನಿಗೆ ಗೇಟ್ ಏನಾದರೆ ಏನು? ಅವನು ಹಣ ಮಾಡಲು ಹೋಗುತ್ತಾನೆ ಎಂದು ಆರೋಪ ಮಾಡಿದರು.
ತುಂಗಭದ್ರಾ ಡ್ಯಾಂ ಗೇಟ್ ತುಂಡಾದ ಪ್ರಕರಣ ತನಿಖೆಗೆ ಕೊಡಬೇಕು. ಸರ್ಕಾರ ಈಗ ತರಾತುರಿಯಲ್ಲಿ ಏನು ಮಾಡಲು ಹೋಗಬೇಡಿ. ತರಾತುರಿಯಲ್ಲಿ ಮಾಡಿ ಮುಂದೆ ಅನಾಹುತ ಮಾಡಿಕೊಳ್ಳಬೇಡಿ. ತಜ್ಞರ ನೇಮಕ ಮಾಡಿ ಸಮಸ್ಯೆ ಪರಿಹಾರ ಮಾಡಿ. ರೈತರಿಗೆ ವಿಶ್ವಾಸ ತುಂಬಿ ಬೆಳೆ ನಷ್ಟ ಆಗದಂತೆ ಕ್ರಮವಹಿಸಬೇಕು. ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದರು. ಈ ಬಾರಿ ಎರಡು ಬೆಳೆ ಸಾಧ್ಯವಾಗುವುದಿಲ್ಲ. ಒಂದು ಬೆಳೆ ಮಾತ್ರ ಈ ಬಾರಿ ಬೆಳೆಯಲು ಸಾಧ್ಯ. ಇದನ್ನ ಸರಿಯಾಗಿ ಮಾಡುವ ಕೆಲಸ ಮಾಡಿ ಎಂದರು.