ಹೊಸ ದಿಗಂತ ವರದಿ, ವಿಜಯನಗರ:
ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದರಿಂದ ಸೋಮವಾರ ಸಂಜೆ ಜಲಾಯಶದ ಮೂರು ಕ್ರಸ್ಟ್ ಗೇಟ್‌ಗಳ ಮೂಲಕ ತುಂಗಭದ್ರಾ ನದಿಗೆ ನೀರು ಹರಿಸಲಾಯಿತು.
ಜಲಾಶಯದ 15,16,17ನೇ ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತುತ್ತಿದ್ದಂತೆ ಹಾಲ್ನೊರೆಯಂತೆ ನೀರು ಧುಮ್ಮುಕ್ಕಿವ ದೃಶ್ಯ ಕಣ್ಮನ ಸೆಳೆಯಿತು. ಈ ವೇಳೆ ಜಲಾಶಯದ ಮುಂಭಾಗದ ಬ್ರಿಜ್ಡ್ ಮೇಲೆ ಸಾಗುತ್ತಿದ್ದ ಪ್ರಯಾಣಿಕರು ವಾವ್ ಎಂಬ ಉದ್ಘಾರ ತೆಗೆದರೆ, ಖಾಸಗಿ ವಾಹನಗಳ ಪ್ರಯಾಣಿಸುತ್ತಿದ್ದವರು ಕೆಲ ಕಾಲ ಗಾಡಿ ನಿಲ್ಲಿಸಿ ಅಪರೂಪದ ದೃಶ್ಯವನ್ನು ವೀಕ್ಷಿಸುವ ಜೊತೆಗೆ ತಮ್ಮ ಮೊಬೈಲ್‌ಗಳಲ್ಲಿ ಸೆರೆಯಿಡಿದು, ಸಂಭ್ರಮಿಸಿದರು.
ತುಂಗಭದ್ರಾ ಜಲಾಶಯದ ಮೇಲ್ಭಾಗ ಹಾಗೂ ಜಲಾನಯನ ಪ್ರದೇಶದಲ್ಲಿ ಅಬ್ಬರದ ಮಳೆಯಾಗುತ್ತಿರುವುದರಿಂದ ಡ್ಯಾಂಗೆ ಪ್ರತಿ ನಿತ್ಯ 1 ಲಕ್ಷ ಕ್ಯೂಸೆಕ್‌ಗಿಂ ಹೆಚ್ಚು ಒಳ ಹರಿವು ದಾಖಲಾಗುತ್ತಿದೆ. ಜಲಾಶಯದ ಒಟ್ಟು 1633 ಅಡಿ ಪೈಕಿ ಸದ್ಯ 1627.79 ಅಡಿಗೆ ನೀರು ತಲುಪಿದೆ. 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ 85.922 ಟಿಎಂಎಸಿ ಅಡಿ ನೀರು ಸಂಗ್ರಹವಾಗಿದೆ. ಅಲ್ಲದೇ, ಸರಾಸರಿ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದರಿಂದ ಮೂರು ಗೇಟ್‌ಗಳನ್ನು ಸುಮಾರು 1 ಅಡಿಯಷ್ಟು ತೆಗೆದಿದ್ದು, 3987 ಕ್ಯೂಸೆಕ್, ಎಡದಂಡೆ ಕಾಲುವೆಗೆ 1257 ಕ್ಯೂಸೆಕ್ ಹಾಗೂ ಬಲದಂಡೆ ಕಾಲುವೆಗೆ 2500 ಕ್ಯೂಸೆಕ್ ಸೇರಿದಂತೆ ಒಟ್ಟು 7744 ಕ್ಯೂಸೆಕ್ ಹೊರ ಹರಿಸಲಾಗುತ್ತಿದೆ.