ಜೀವನದಲ್ಲಿ ಮುಂದೆ ಸಾಗಲು ಎದುರು ನೋಡುತ್ತಿದ್ದೇನೆ: ಹಾಕಿಗೆ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ವಿದಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಜುಲೈ 26 ರಿಂದ 2024ರ ಪ್ಯಾರಿಸ್ ಒಲಿಂಪಿಕ್ಸ್‌ ಆರಂಭವಾಗಲಿದೆ. ಈ ಬಾರಿಯ ಕ್ರೀಡಾಕೂಟಕ್ಕೆ ಭಾರತದಿಂದ ಒಟ್ಟು 117 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಹಾಕಿ ತಂಡವೂ ಸೇರಿದೆ.

ಕಳೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ ಭಾರತ ಹಾಕಿ ತಂಡದ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಿದೆ. ಈ ನಡುವೆ ಭಾರತ ತಂಡದ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಜೇಶ್, ಪ್ಯಾರಿಸ್ ಕ್ರೀಡಾಕೂಟ ಮುಗಿದ ನಂತರ ಈ ಕ್ರೀಡೆಗೆ ವಿದಾಯ ಹೇಳುವುದಾಗಿ ಸೋಮವಾರ ಘೋಷಿಸಿದ್ದಾರೆ.

ವಾಸ್ತವವಾಗಿ ಎರಡು ದಿನಗಳ ಹಿಂದಷ್ಟೇ ಭಾರತ ಹಾಕಿ ತಂಡ ಒಲಿಂಪಿಕ್ಸ್ ಕ್ರೀಡಾ ಗ್ರಾಮಕ್ಕೆ ತೆರಳಿತ್ತು. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸೂಪರ್‌ಸ್ಟಾರ್ ಗೋಲ್‌ಕೀಪರ್ ಶ್ರೀಜೇಶ್ ಜುಲೈ 22 ಸೋಮವಾರದಂದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ಶ್ರೀಜೇಶ್, ‘ನಾನೀಗ ನನ್ನ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್‌ನಲ್ಲಿ ನಿಂತಿದ್ದೇನೆ. ನಾನು ನನ್ನ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಮುಂದೆ ಸಾಗಲು ಎದುರು ನೋಡುತ್ತಿದ್ದೇನೆ. ಇಲ್ಲಿಯವರೆಗಿನ ನನ್ನ ಪ್ರಯಾಣವು ಉತ್ತಮವಾಗಿದ್ದು, ಇದಕ್ಕೆ ಸಹಕಾರ ನೀಡಿದ ನನ್ನ ಕುಟುಂಬ, ತಂಡದ ಸಹ ಆಟಗಾರರು, ಎಲ್ಲಾ ತರಬೇತುದಾರರು, ಅಭಿಮಾನಿಗಳು ಮತ್ತು ಹಾಕಿ ಇಂಡಿಯಾದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಕಷ್ಟದ ಸಮಯದಲ್ಲಿ ನನ್ನ ಸಹ ಆಟಗಾರರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾವೆಲ್ಲರೂ ಪ್ಯಾರಿಸ್‌ನಲ್ಲಿ ನಮ್ಮ ಕೈಲಾದದ್ದನ್ನು ಮಾಡಲು ಬಯಸುತ್ತೇವೆ. ಖಂಡಿತವಾಗಿಯೂ ನಮ್ಮ ಪದಕದ ಬಣ್ಣವನ್ನು ಬದಲಾಯಿಸಲು ಬಯಸುತ್ತೇನೆ’ ಎಂದಿದ್ದಾರೆ.

ಕೊಚ್ಚಿಯಲ್ಲಿ ಜನಿಸಿದ ಪರಾತು ರವೀಂದ್ರನ್ ಶ್ರೀಜೇಶ್ 2006 ರಲ್ಲಿ ತಮ್ಮ 18 ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಹಿರಿಯ ಗೋಲ್‌ಕೀಪರ್‌ಗಳಿಂದಾಗಿ ಶ್ರೀಜೇಶ್ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬಹಳ ಸಮಯ ಕಾಯಬೇಕಾಯಿತು ಮತ್ತು ಆಗಾಗ್ಗೆ ತಂಡದಿಂದ ಹೊರಗುಳಿಯಬೇಕಾಯಿತು. ಆದರೆ 2011 ರ ನಂತರ ಅವರು ಟೀಮ್ ಇಂಡಿಯಾದ ಗೋಡೆಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಇಲ್ಲಿಂದ ಶ್ರೀಜೇಶ್ ಅವರು ತಮ್ಮ ಗೋಲ್‌ಕೀಪಿಂಗ್‌ನ ಆಧಾರದ ಮೇಲೆ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಈವೆಂಟ್‌ಗಳಲ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2014 ಮತ್ತು 2018 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂದ್ಯಾವಳಿಯ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿಯನ್ನು ಗೆದ್ದಿರುವುದು ಅವರ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

2016 ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಬ್ದಾರಿಯನ್ನು ಶ್ರೀಜೇಶ್ ವಹಿಸಿಕೊಂಡರು. ಅವರ ನಾಯಕತ್ವದಲ್ಲಿ ತಂಡವು ಕ್ವಾರ್ಟರ್ ಫೈನಲ್ ತಲುಪಿತು. ನಂತರ 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಶ್ರೀಜೇಶ್ ಪಡೆ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಸೆಮಿಫೈನಲ್‌ನಲ್ಲಿ ಸೋತ ಭಾರತ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿ 41 ವರ್ಷಗಳ ನಂತರ ಪದಕ ಗೆದ್ದುಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!